ಚಿತ್ರದುರ್ಗ, ಡಿ 03 (DaijiworldNews/HR): ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್ಜೆಎಂ) ನಡೆಸುತ್ತಿರುವ ಅನಾಥಾ ಶ್ರಮದಿಂದ 22 ಮಕ್ಕಳು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮಕ್ಕಳ ಹಕ್ಕುಗಳ ಆಯೋಗ, ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್, ಗವರ್ನರ್ ತಾವರ್ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಹೋರಾಟಗಾರ ಮತ್ತು ಆರ್ಟಿಐ ಕಾರ್ಯಕರ್ತ ಬಿ ಎಚ್ ಗೌಡ್ರು ನವೆಂಬರ್ 25 ರಂದು ದೂರು ದಾಖಲಿಸಿದ್ದು, ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕು ಆಯೋಗ ಶುಕ್ರವಾರ ಮಠಕ್ಕೆ ನೋಟಿಸ್ ಜಾರಿ ಮಾಡಿದೆ.
ಇನ್ನು ಎಸ್ಜೆಎಂ ಮಠದ ಪೀಠಾಧಿಪತಿ ಮತ್ತು ಏಕೈಕ ವ್ಯವಸ್ಥಾಪಕ ಟ್ರಸ್ಟಿ ಶಿವಮೂರ್ತಿ ಶರಣರು 2001 ರಿಂದ ಮಠದ ಆವರಣದಲ್ಲಿ ಮಕ್ಕಳಿಗಾಗಿ ಮೂರು ಆಶ್ರಯ ಮನೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮುರುಘಾ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಅನಾಥ ಮಕ್ಕಳ ಆಶ್ರಯಧಾಮ, ಅಕ್ಕಮಹಾದೇವಿ ವಸತಿ ನಿಲಯ ಮತ್ತು ಎಸ್ಜೆಎಂ ವಿದ್ಯಾಪೀಠ ಎಂಬ ಮೂರು ಆಶ್ರಯಧಾಮಗಳು ನಡೆಯುತ್ತಿವೆ ಎಂದು ಗೌಡ್ರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.