ಅಹಮದಾಬಾದ್, ಡಿ 02 (DaijiworldNews/DB): ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲ್ಪಟ್ಟಿರುವ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಗೋಲ್ಡಿ ಬ್ರಾರ್ನನ್ನು ಪಂಜಾಬ್ ಪೊಲೀಸರು ವಶಕ್ಕೆ ತೆಗೆದುಕೊಂಡು ಶೀಘ್ರ ಭಾರತಕ್ಕೆ ಕರೆ ತರಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಯಾಲಿಫೋರ್ನಿಯಾ ಪೊಲೀಸರು ಗೋಲ್ಡಿ ಬ್ರಾರ್ನನ್ನು ಬಂಧಿಸಿದ್ದಾರೆ. ಭಾರತ ಸರ್ಕಾರ ಹಾಗೂ ಪಂಜಾಬ್ ಸರ್ಕಾರವನ್ನು ಅವರು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರವಾಗಿಯೂ ಚರ್ಚೆ ನಡೆಸಿದ್ದಾರೆ. ಶೀಘ್ರ ಆತನನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದರು.
ಬ್ರಾರ್ ಪಾಕಿಸ್ತಾನದ ಮೂಲಕ ಗ್ಯಾಂಗ್ ಬಳಸಿ ಅಪರಾಧಗಳನ್ನು ಎಸಗುತ್ತಿದ್ದ. ಹೀಗಾಗಿ ಇತರ ಆರೋಪಿಗಳನ್ನೂ ವಿಚಾರಣೆಗೊಳಪಡಿಸುವ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ ಎಂದವರು ಇದೇ ವೇಳೆ ತಿಳಿಸಿದರು.