ಮಹಾರಾಷ್ಟ್ರ, ಡಿ 02 (DaijiworldNews/DB): ತನ್ನ ಮೇಲೆ ಹಲ್ಲೆಗೈದ ವ್ಯಕ್ತಿಯ ಒಂಬತ್ತು ವರ್ಷದ ಮಗಳನ್ನು ಬಾಲಕನೊಬ್ಬ ಅತ್ಯಾಚಾರ ಎಸಗಿ ಕೊಲೆಗೈದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
15 ವರ್ಷದ ಬಾಲಕ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬನ ಜೊತೆ ಜಗಳವಾಡಿದ್ದು, ಈ ವೇಳೆ ವ್ಯಕ್ತಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತೀಕಾರವಾಗಿ ಬಾಲಕ ಆ ವ್ಯಕ್ತಿಯ ಒಂಬತ್ತು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.
ಕಲ್ಯಾಣ್ ರೈಲ್ವೇ ನಿಲ್ದಾಣದ ಬಳಿಯ ಕಲ್ಯಾಣಿ ಪಶ್ಚಿಮ ಪ್ರದೇಶದ ವಸತಿ ಸೊಸೈಟಿ ಆವರಣದಲ್ಲಿ ಗುರುವಾರ ಮುಂಜಾನೆ ಬಾಲಕಿಯೊಬ್ಬಳ ಶವ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕನ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಮಹಾತ್ಮ ಫುಲೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಿಸಿದಾಗ ಬಾಲಕ ಸತ್ಯ ಬಾಯ್ಬಿಟ್ಟಿದ್ದಾನೆ.
ಬಾಲಕಿಯ ತಂದೆಯೊಂದಿಗೆ ಎರಡು ದಿನಗಳ ಹಿಂದೆ ಜಗಳವಾಗಿದ್ದು, ಅವರು ನನ್ನ ಮೇಲೆ ಹಲ್ಲೆಗೈದಿದ್ದಕ್ಕೆ ಪ್ರತೀಕಾರವಾಗಿ ಆತನ ಪುತ್ರಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಳಿಕ ಬ್ಲೇಡ್ನಿಂದ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಬಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.