ನವದೆಹಲಿ, ಡಿ 01 (DaijiworldNews/DB): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವೀಡಿಯೋಗಳನ್ನು ಆನ್ಲೈನ್ನಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಿಧೆಡೆ ಸಿಬಿಐ ಗುರುವಾರ ದಾಳಿ ನಡೆಸಿದೆ.
ದೆಹಲಿ, ತಿರುಚಿರಾಪಳ್ಳಿ ಮುಂತಾದೆಡೆ ಸಿಬಿಐ ಕಾರ್ಯಾಚರಣೆ ನಡೆಸಿದೆ. ದಾಳಿ ವೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂಟರ್ಪೋಲ್ ಘಟಕದ ಮಾಹಿತಿಯಾಧರಿತವಾಗಿ ಈ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಪರೇಷನ್ ಮೇಘಚಕ್ರದ ಭಾಗವಾಗಿ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳಲ್ಲಿ ಸೆಪ್ಟಂಬರ್ನಲ್ಲಿ ಸಿಬಿಐ ಇದೇ ರೀತಿಯ ದಾಳಿ ನಡೆಸಿ ಶೋಧ ನಡೆಸಿತ್ತು. ಇನ್ನು ಗುಪ್ತಚರ ಮತ್ತು ಸಿಂಗಾಪುರದ ಇಂಟರ್ಪೋಲ್ ಮಾಹಿತಿಯಾಧರಿಸಿಯೂ ಕಳೆದ ವರ್ಷ ದಾಳಿ ನಡೆಸಲಾಗಿತ್ತು. ಕ್ಲೌಡ್ ಸ್ಟೋರೇಜ್ನ್ನು ಉಪಯೋಗಿಸಿಕೊಂಡು ಆನ್ಲೈನ್ ಮೂಲಕ ಪೆಡ್ಲರ್ಗಳು ಈ ದಂಧೆಯನ್ನು ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ನಡೆದ ದಾಳಿ ಇದಾಗಿತ್ತು.