ನವದೆಹಲಿ, ಡಿ 01 (DaijiworldNews/DB): ಕಚ್ಚಾ ತೈಲದ ದರ ಕಡಿಮೆ ಇದ್ದರೂ, ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಇಳಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಆರು ತಿಂಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಶೇ 25ಕ್ಕಿಂತಲೂ ಅಧಿಕ ದರ ಅಗ್ಗವಾಗಿದ್ದರೂ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಕೆಗೆ ಮುಂದಾಗಿಲ್ಲ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ಇಳಿಕೆಯಾದರೆ ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆಯಲ್ಲಿ ಪ್ರತಿ ಲೀಟರ್ಗೆ 10 ರೂ.ಗಳಿಗಿಂತ ಕಡಿಮೆಯಾಗಬಹುದು. ಆದರೆ ಒಂದು ರೂಪಾಯಿಯನ್ನೂ ಇಲ್ಲಿ ಇಳಿಕೆ ಮಾಡದಿರುವುದು ದುರದೃಷ್ಟಕರ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರದಿಂದಾಗಿ ಈಗಾಗಲೇ ದೇಶದ ಜನರು ನಲುಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಮತ್ತಷ್ಟು ಲೂಟಿ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.