ಪಾಟ್ನಾ, ಡಿ 01 (DaijiworldNews/DB): ದೇಶದಲ್ಲಿ ಒಂದು ದೇಶ, ಒಂದು ವಿದ್ಯುತ್ ದರ ನೀತಿ ಜಾರಿಗೊಳಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಹಾರದಲ್ಲಿ 15,871 ಕೋಟಿ ರೂ. ಮೌಲ್ಯದ ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಲವು ರಾಜ್ಯಗಳಲ್ಲಿ ಬೇರೆ ರಾಜ್ಯಗಳಿಗಿಂತ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿ ಮಾಡಬೇಕಾದ ಪರಿಸ್ಥಿತಿ ಇದೆ. ಬಿಹಾರವೂ ಈ ಪರಿಸ್ಥಿತಿಯಿಂದ ಭಿನ್ನವಾಗಿಲ್ಲ ಎಂದರು.
ಒಂದು ದೇಶ, ಒಂದು ವಿದ್ಯುತ್ ದರ ನೀತಿಯನ್ನು ಕೇಂದ್ರ ಜಾರಿಗೊಳಿಸಿದರೆ ವಿದ್ಯುತ್ ಖರೀದಿಯಲ್ಲಿ ಯಾವುದೇ ರಾಜ್ಯಗಳಿಗೆ ಹೊರೆಯಾಗದು. ಅಲ್ಲದೆ ರಾಜ್ಯಗಳ ಒಟ್ಟಾರೆ ಅಭಿವೃದ್ದಿಯಲ್ಲಿಯೂ ಮತ್ತು ಅದರಿಂದ ದೇಶದ ಅಭಿವೃದ್ದಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಇದರಿಂದ ಸಾಧ್ಯವಾಗಲಿದೆ ಎಂದವರು ಪ್ರತಿಪಾದಿಸಿದರು.
ಕಳೆದ ಹಲವು ಸಮಯಗಳಿಂದ ಏಕ ದೇಶ, ಏಕ ವಿದ್ಯುತ್ ದರ ನೀತಿಗಾಗಿ ನಾನು ಒತ್ತಾಯಿಸುತ್ತಲೇ ಬಂದಿದ್ದೇನೆ. ಹಲವು ವೇದಿಕೆಗಳಲ್ಲಿಯೂ ಇದನ್ನು ಹೇಳಿದ್ದೇನೆ. ಕೇಂದ್ರ ಇದನ್ನು ಪರಿಗಣಿಸಿದರೆ ಉತ್ತಮ ಎಂದವರು ತಿಳಿಸಿದರು.