ಮುಂಬೈ, ಡಿ 01 (DaijiworldNews/DB): ಲೈವ್ ಸ್ಟ್ರೀಮಿಂಗ್ ವೇಳೆ ಇಬ್ಬರು ಯುವಕರು ಅಸಭ್ಯವಾಗಿ ನಡೆದುಕೊಂಡ ವಿಚಾರವಾಗಿ ಭಾರತದ ಪೊಲೀಸರು ಕ್ಷಿಪ್ರ ಕಾರ್ಯ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಎಂದು ಕೊರಿಯಾ ಯೂಟ್ಯೂಬರ್ ಹ್ಯೋಜಿಯಾಂಗ್ ಪಾರ್ಕ್ ಹೇಳಿದ್ದಾರೆ.
ಮುಂಬೈನ ಖಾರ್ ನಲ್ಲಿ ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹ್ಯೋಜಿಯಾಂಗ್ ಪಾರ್ಕ್ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಓರ್ವ ಮುತ್ತು ನೀಡುವಂತೆ ಆಕೆಗೆ ಬಲವಂತ ಮಾಡಿದ್ದು ಅನಗತ್ಯ ಕಿರುಕುಳ ನೀಡಿದ್ದರು. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳಾದ ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಅವರನ್ನು ಬಂಧಿಸಿದ್ದರು.
ಘಟನೆ ಕುರಿತಂತೆ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಪಾರ್ಕ್, ನನಗೆ ಇಂತಹ ಕೆಟ್ಟ ಅನುಭವ ಬೇರೆ ದೇಶದಲ್ಲಿಯೂ ಆಗಿತ್ತು. ಆದರೆ ಆ ವೇಳೆ ಪೊಲೀಸರಿಗೆ ಕರೆ ಮಾಡುವುದು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಭಾರತದಲ್ಲಿ ಕ್ಷಿಪ್ರವಾಗಿ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಕಳೆದ ಮೂರು ವಾರಗಳಿಂದ ಮುಂಬೈನಲ್ಲಿದ್ದು, ಇನ್ನೂ ಹೆಚ್ಚು ಕಾಲ ಇಲ್ಲೇ ಇರಲು ನಿರ್ಧರಿಸಿದ್ದೇನೆ. ಈ ಘಟನೆ ನನ್ನ ಪ್ರಯಾಣ ಮತ್ತು ಉದ್ದೇಶ ನಾಶಕ್ಕೆ ಕಾರಣ ಆಗಬಾರದು. ಅದ್ಭುತ ಭಾರತವನ್ನು ಬೇರೆ ದೇಶಗಳಿಗೆ ತೋರಿಸುವುದು ನನ್ನ ಉದ್ದೇಶ ಎಂದಿದ್ದಾರೆ.