ನವದೆಹಲಿ, ಡಿ 01 (DaijiworldNews/HR): ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿತ್ ಪೂನಾವಾಲನಿಗೆ ಇಂದು ಮಂಪರು (ನಾರ್ಕೋ) ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆತನ ಆರೋಗ್ಯದ ಪರಿಸ್ಥಿತಿ ಉತ್ತಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರೋಹಿಣಿಯಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಬೆಳಗ್ಗೆ 8-40ಕ್ಕೆ ಅಫ್ತಾಬ್ ನನ್ನು ಕರೆದೊಯ್ಯಲಾಗಿದ್ದು, ಬಳಿಕ 10 ಗಂಟೆಗೆ ಮಂಪರು ಪರೀಕ್ಷೆ ಆರಂಭಿಸಿ ಆತನ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಪರೀಕ್ಷೆಗೂ ಮುನ್ನ ರಕ್ತದೊತ್ತಡ, ದೇಹದ ಉಷ್ಣಾಂಶ, ಹೃದಯದ ಬಡಿತವನ್ನು ಪರೀಕ್ಷಿಸಲಾಗಿದ್ದು, ಆತನಿಂದ ಸಹಿ ಪಡೆದ ನಂತರ ಮಂಪರು ಪರೀಕ್ಷೆ ಪ್ರಕ್ರಿಯೆ ಪ್ರಾರಂಭಿಸಲಾಯಿತು.
ಬುಧವಾರದಂದು ರೋಹಿಣಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ನಡೆಸಿದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಪೂನಾವಾಲಾ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.