ಬೆಂಗಳೂರು, ಡಿ 01 (DaijiworldNews/HR): ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ವರನನ್ನು ಹುಡುಕುತ್ತಿದ್ದ ಯುವತಿಗೆ ವಿದೇಶಿ ನೌಕರನ ಸೋಗಿನಲ್ಲಿ ಸೈಬರ್ ಕಳ್ಳನೊಬ್ಬ 2.33 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ವಂಚನೆಗೊಳಗಾದ ಯುವತಿಯನ್ನು ಉಲ್ಲಾಳ ಉಪನಗರದ ಸುಶ್ಮಿತಾ (28) ಎನ್ನಲಾಗಿದೆ.
ಸುಶ್ಮಿತಾ ಅವರು ವರನನ್ನು ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಹುಡುಕುತ್ತಿದ್ದು, ಆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸುಶ್ಮಿತಾಗೆ ಸಂದೇಶ ಕಳುಹಿಸಿ ತನ್ನನ್ನು ರಾಜೀವ್ ಎಂದು ಪರಿಚಯಿಸಿಕೊಂಡು ತಾನು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸದ್ಯದಲ್ಲೇ ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿ ಯುವತಿಯ ವಾಟ್ಸ್ಆಯಪ್ ನಂಬರ್ ಪಡೆದಿದ್ದ.
ಇನ್ನು ಆತನ ಮಾತಿಗೆ ಮರುಳಾದ ಯುವತಿ ಆತನ ಜತೆಗೆ ಚಾಟ್ ಮಾಡುತ್ತಿದ್ದಳು. ಭಾರತಕ್ಕೆ ಬಂದ ಬಳಿಕ ವಿವಾಹದ ಕುರಿತು ಮಾತುಕತೆ ನಡೆಸೋಣ ಎಂದು ಹೇಳಿದ್ದ.
ಕೆಲ ದಿನಗಳ ಹಿಂದೆ ಸುಶ್ಮಿತಾಗೆ ಕರೆ ಮಾಡಿದ ಪರಿಚಿತ ತಾನು ಭಾರತಕ್ಕೆ ಬಂದಿದ್ದು, ನನ್ನ ಬಳಿ ವಿದೇಶಿ ಕರೆನ್ಸಿ ಇದೆ. ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಬೇಕು. ಸದ್ಯ ಟ್ರಾವೆಲಿಂಗ್, ಸೆಕ್ಯೂರಿಟಿ, ಓನರ್ಶಿಪ್, ಕಸ್ಟಮ್ಸ್, ಜಿಎಸ್ಟಿ ಚಾರ್ಜ್ ಪಾವತಿಸಲು ತುರ್ತು ಹಣದ ಅಗತ್ಯತೆ ಇದೆ ಎಂದು ಹೇಳಿದ್ದ. ಇದನ್ನು ನಂಬಿ ಯುವತಿ ಆತ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ- ಹಂತವಾಗಿ 2.33 ಲಕ್ಷ ರೂ. ಅನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾಳೆ.
ಇನ್ನು ಹಣ ಪಡೆದುಕೊಂಡ ಬಳಿಕ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ.