ಅಹಮದಾಬಾದ್, ನ 30 (DaijiworldNews/DB): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ರಾಜ್ಯದ 25 ಸಾವಿರ ಶೂನ್ಯ ವಿದ್ಯುತ್ ಬಿಲ್ಗಳನ್ನು ಗುಜರಾತ್ನಲ್ಲಿ ಪ್ರದರ್ಶಿಸಿದ್ದು, ಎಎಪಿಯನ್ನು ಅಧಿಕಾರಕ್ಕೆ ತಂದಲ್ಲಿ ನೀವೂ ಇದೇ ರೀತಿ ಶೂನ್ಯ ವಿದ್ಯುತ್ ಬಿಲ್ ಪಡೆಯಬಹುದು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಪಂಜಾಬ್ನಲ್ಲಿ ಒಟ್ಟು 75 ಲಕ್ಷ ಮನೆಗಳಿದ್ದು, ಈ ಪೈಕಿ 61 ಲಕ್ಷ ಮನೆಗಳಲ್ಲಿ ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ. ಅಲ್ಲಿ ನೀಡಿದ ಭರವಸೆಯಂತೆಯೇ ಎಎಪಿ ನಡೆದುಕೊಂಡಿದೆ. ಗುಜರಾತ್ನಲ್ಲಿಯೂ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ಎಎಪಿ ನೀಡಿದೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ಗುಜರಾತ್ ಜನರಿಗೆ ಈ ಸೌಲಭ್ಯ ಒದಗಿಸಲು ನಾವು ಬದ್ದ ಎಂದರು.
ನಾನಿಲ್ಲಿ ತಂದಿರುವ ಶೂನ್ಯ ವಿದ್ಯುತ್ ಬಿಲ್ಗಳಲ್ಲಿರುವ ಹೆಸರು, ವಿಳಾಸವನ್ನು ನೀವು ಪರಿಶೀಲಿಸಬಹುದು. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ ಎಂದವರು ಭರವಸೆ ನೀಡಿದರು.
ಗುಜರಾತ್ನಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದ್ದು, ನಾಳೆ (ಡಿಸೆಂಬರ್ 1) ಮೊದಲ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 5ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ.