ಬೆಂಗಳೂರು, ನ 30 (DaijiworldNews/MS):ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಹೊಂದುವ ಮೂಲಕ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎನ್ನುವ ಆರೋಪದ ಮೇಲೆ ಪಿಎಫ್ಐ ಸಂಘಟನೆಯನ್ನು ಕಳೆದ ಸೆಪ್ಟೆಂಬರ್ 28ರಂದು ಐದು ವರ್ಷಗಳವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು 3 ಗಂಟೆಗೆ ತೀರ್ಪು ಪ್ರಕಟಿಸಿದ್ದಾರೆ. ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.
ಭಯೋತ್ಪಾದಕ ಸಂಘಟನೆಗಳ ಜೊತೆಗಿನ ಸಂಪರ್ಕದ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂಬ ಆರೋಪದ ಮೇಲೆ ಪಿಎಫ್ಐ ಅನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಪಿಎಫ್ಐ ಕರ್ನಾಟಕ ರಾಜ್ಯ ಘಟಕದ ರಾಜ್ಯಾಧ್ಯಕ್ಷ ನಾಸಿರ್ ಪಾಷಾ ಸಲ್ಲಿಸಿದ ಮನವಿಯಲ್ಲಿ ಈ ತೀರ್ಪು ನೀಡಲಾಗಿದೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 28 ರಂದು ಯುಎಪಿಎ ಸೆಕ್ಷನ್ 3 ರ ಅಡಿಯಲ್ಲಿ ಪಿಎಫ್ಐ ಅನ್ನು ಕಾನೂನುಬಾಹಿರ ಎಂದು ಘೋಷಿಸಿತು ಮತ್ತು ಐದು ವರ್ಷಗಳ ಕಾಲ ಅದರ ಮೇಲೆ ನಿಷೇಧ ಹೇರಿತ್ತು.