ನವದೆಹಲಿ, ನ 30 (DaijiworldNews/DB): ಲಿವ್ ಇನ್ ಸಂಗಾತಿಯನ್ನು ಭೀಕರವಾಗಿ ಕೊಲೆಗೈದ ಅಫ್ತಾಬ್ ಅಮಿನ್ ಪೂನಾವಾಲನ ಕೃತ್ಯ ತಿಳಿದು ಆತನ ಹೊಸ ಗೆಳತಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಆಕೆಗೆ ಶ್ರದ್ದಾಳ ಉಂಗುರವನ್ನೇ ಅಫ್ತಾಬ್ ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದು ಬಂದಿದೆ.
ಮನೋವೈದ್ಯೆಯೊಬ್ಬಳನ್ನು ಡೇಟಿಂಗ್ ಆಪ್ ಮೂಲಕ ಪರಿಚಯಿಸಿಕೊಂಡಿದ್ದ ಅಫ್ತಾಬ್, ಶ್ರದ್ದಾ ಕೊಲೆಯ ಬಳಿಕ ಆಕೆಯನ್ನು ಎರಡು ಬಾರಿ ತನ್ನ ಛತ್ತರ್ಪುರ ಫ್ಲ್ಯಾಟ್ಗೆ ಕರೆಸಿಕೊಂಡಿದ್ದ. ಈ ವೇಳೆ ಶ್ರದ್ದಾಳ ದೇಹದ ಭಾಗಗಳನ್ನು ಆತನ ಫ್ರಿಡ್ಜ್ನಲ್ಲೇ ಇಟ್ಟಿದ್ದ. ಆದರೆ ಈ ವಿಚಾರ ಆತನ ಹೊಸ ಗೆಳತಿಗೆ ತಿಳಿದಿರಲಿಲ್ಲ.
ಸದ್ಯ ಆಕೆಯನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆತನ ಕೃತ್ಯಕ್ಕೆ ಆಕೆ ಆಘಾತ ವ್ಯಕ್ತಪಡಿಸಿದ್ದಾಳೆ. ಆತನ ಫ್ಲ್ಯಾಟ್ಗೆ ಎರಡು ಬಾರಿ ಭೇಟಿ ನೀಡಿದ್ದೆ. ಆಗ ಶ್ರದ್ದಾಳ ದೇಹದ ಭಾಗಗಳು ಫ್ರಿಡ್ಜ್ನಲ್ಲಿರುವ ಸಣ್ಣ ಸುಳಿವೂ ನನಗೆ ಸಿಕ್ಕಿರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಇನ್ನು ಆತ ತನಗೆ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾಗಿಯೂ ಆಕೆ ಪೊಲೀಸರಿಗೆ ತಿಳಿಸಿದ್ದು, ಆ ಉಂಗುರ ಶ್ರದ್ದಾಳದ್ದಾಗಿರಬಹುದು ಎಂಬ ಶಂಕೆಯ ಮೇರೆಗೆ ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ ಡೇಟಿಂಗ್ ಸೈಟ್ಗಳ ಮೂಲಕ ಆತ ಕನಿಷ್ಠ 20 ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.