ನವದೆಹಲಿ, ನ 30 (DaijiworldNews/DB): ದೆಹಲಿ ಮದ್ಯ ನೀತಿ ಹಗರಣ ಸಂಬಂಧಿಸಿ ಇಡಿಯಿಂದ ಮತ್ತೊಂದು ಬಂಧನವಾಗಿದ್ದು, ಈವರೆಗಿನ ಬಂಧಿತರ ಸಂಖ್ಯೆ ಐದಕ್ಕೇರಿದೆ. ಬಡ್ಡಿ ರಿಟೇಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅಮಿತ್ ಅರೋರಾ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಅಮಿತ್ ಅರೋರಾ ಅವರು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಆಪ್ತರಾಗಿದ್ದಾರೆಂದು ತಿಳಿದು ಬಂದಿದೆ. ಇನ್ನು ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರು ಸಿಸೋಡಿಯಾ ಅವರಿಗೆ ಮದ್ಯ ಪರವಾನಗಿದಾರರಿಂದ ಸಂಗ್ರಹಿಸಿದ ಹಣದ ಲಾಭವನ್ನು ನಿರ್ವಹಣೆ ಮಾಡುವಲ್ಲಿ ಮತ್ತು ವಸೂಲಾತಿ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸಿಬಿಐ ಆರೋಪ ಹೊರಿಸಿತ್ತು. ಇನ್ನು ಮದ್ಯದ ಉದ್ಯಮಿ ಸಮೀರ್ ಮಹಂದ್ರು ಅವರನ್ನು ಸೆಪ್ಟೆಂಬರ್ 27ರಂದು ಇಡಿ ವಿಚಾರಣೆ ನಡೆಸಿ ಬಳಿಕ ಬಂಧಿಸಿತ್ತು.
ಈ ನಡುವೆ ಸಿಬಿಐ ದಾಖಲಿಸಿದ ಎಫ್ಐಆರ್ನಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಹೆಸರಿದ್ದರೂ, ಚಾರ್ಜ್ಶೀಟ್ನಲ್ಲಿ ಅವರ ಹೆಸರು ನಾಪತ್ತೆಯಾಗಿದೆ. ಪ್ರಕರಣ ಸಂಬಂಧಿಸಿ ಇಡಿ169 ಶೋಧ ಕಾರ್ಯಾಚರಣೆ ನಡೆಸಿದೆ.