ಡೆಹ್ರಾಡೂನ್, ನ 30 (DaijiworldNews/DB): ಸೂಕ್ತ ದಾಖಲೆರಹಿತವಾಗಿ ಸ್ಯಾಟಲೈಟ್ ಫೋನ್ ಸಾಗಾಟ ಮಾಡುತ್ತಿದ್ದ ರಷ್ಯಾದ ಮಾಜಿ ಸಚಿವರನ್ನು ಉತ್ತರಾಖಂಡದ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದ ವಿಕ್ಟರ್ ಸೆಮೆನೋವ್ (64) ಬಂಧಿತರು. ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಭದ್ರತಾ ಸಿಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರಲ್ಲಿ ಸ್ಯಾಟಲೈಟ್ ಫೋನ್ ಪತ್ತೆಯಾಗಿತ್ತಲ್ಲದೆ ಯಾವುದೇ ದಾಖಲೆಗಳಿರಲಿಲ್ಲ. ಪೂರ್ವಾನುಮತಿ ರಹಿತವಾಗಿ ಉಪಗ್ರಹ ಫೋನ್ಗಳನ್ನು ಕೊಂಡೊಯ್ಯುವುದು ವಿಮಾನ ನಿಲ್ದಾಣದಲ್ಲಿ ನಿಷಿದ್ದವಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು.
1998ರಿಂದ 1999ರವರೆಗೆ ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದ ವಿಕ್ಟರ್, ವೈಯಕ್ತಿಕ ಬಳಕೆಗಾಗಿ ಮತ್ತು ತುರ್ತು ಸಂದರ್ಭಗಳಲ್ಲಿ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಉಪಗ್ರಹ ಫೋನ್ ಕೊಂಡೊಯ್ಯುತ್ತಿರುವುದಾಗಿ ಅವರು ಈ ವೇಳೆ ಅಧಿಕಾರಿಗಳ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಇಂಡಿಗೋ ವಿಮಾನದಲ್ಲಿ ಅವರು ದೆಹಲಿಗೆ ತೆರಳುವವರಿದ್ದರು.