ಬೆಂಗಳೂರು, ನ 29 (DaijiworldNews/MS): ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿಯ ಕುರಿತು ಕಾಂಗ್ರೆಸ್ ವ್ಯಂಗ್ಯವಾಡಿದ್ದು "ದೆಹಲಿ ಟೂರಿಸ್ಟ್ ಸಿಎಂ ಬೊಮ್ಮಾಯಿ ಅವರನ್ನು ನೋಡಿ ಅಯ್ಯೋ ಪಾಪ ಎನಿಸುತ್ತಿದೆ "! ಎಂದು ಹೇಳಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ " ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ ಮಾಡುತ್ತೇನೆ ಎಂದಿದ್ದ ಬೊಮ್ಮಾಯಿ ಅವರಿಗೆ ನಡ್ಡಾ ಅಪಾಯಿಂಟ್ಮೆಂಟ್ ಕೊಡಲು ಸತಾಯಿಸುತ್ತಿರುವುದೇಕೆ? ರಾಜ್ಯದ ಸಿಎಂ ಬೊಮ್ಮಾಯಿಯವರನ್ನ ಕಂಡರೆ ಹೈಕಮಾಂಡಿಗೆ ಅಷ್ಟೊಂದು ತಾತ್ಸಾರವೇ? ಬೊಮ್ಮಾಯಿಯವರು ಅಷ್ಟು ಅಸಮರ್ಥರೆ? ಬೊಮ್ಮಾಯಿಯವರೆಂದರೆ ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆಯೇ? ದೆಹಲಿ ಟೂರಿಸ್ಟ್ ಬಿಎಸ್ ಬೊಮ್ಮಾಯಿ ಅವರನ್ನು ಹೈಕಮಾಂಡ್ ನಾಯಕರು ಭೇಟಿ ಮಾಡಲು ಸತಾಯಿಸುತ್ತಿರುವುದು ನೋಡಿ ಆಯ್ಯೋ ಪಾಪ ಎನಿಸುತ್ತಿದೆ ಎಂದು ಲೇವಡಿ ಮಾಡಿದೆ.
ಇದುವರೆಗೂ 12 ಬಾರಿ ದೆಹಲಿ ಭೇಟಿ ಮಾಡಿದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲ, ಈಗಲೂ ಆಗುವುದಿಲ್ಲ. ಬೊಮ್ಮಾಯಿಯವರ ಸಂಕಟ ವಿಸ್ತರಣೆಯಾಗುತ್ತಿದೆಯೇ ಹೊರತು ಸಂಪುಟ ವಿಸ್ತರಣೆಯಲ್ಲ. 40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ! ಬಿಜೆಪಿಯಲ್ಲಿ "ರೌಡಿ ಮೋರ್ಚಾ" ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ . ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬೊಮ್ಮಾಯಿ ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ್ ಎಂದು ಪ್ರಶ್ನಿಸಿದೆ.