ಬೆಂಗಳೂರು, ನ 29 (DaijiworldNews/MS): ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ನಟೋರಿಯಸ್ ರೌಡಿ ಶೀಟರ್ ಆಗಿದ್ದ ಸೈಲೆಂಟ್ ಸುನೀಲ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದರ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಇದು ತೀವ್ರ ಟೀಕೆಗೆ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದ್ದು ಇದರ ಬೆನ್ನಲ್ಲೇ ನಳಿನ್ ಹೇಳಿಕೆಯೂ ಹೊರಬಿದ್ದಿದೆ.
ಸೋಮವಾರ ಚಾಮರಾಜಪೇಟೆಯಲ್ಲಿ ನಡೆದಿದ್ದ ರಕ್ತದಾನ ಶಿಬಿರದ ನೇತೃತ್ವ ಸೈಲೆಂಟ್ ಸುನೀಲ ವಹಿಸಿದ್ದು, ಶಿಬಿರದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕರಾದ ಉದಯ್ ಗರುಡಚಾರ್ ಹಾಗೂ ಎನ್ ಆರ್ ರಮೇಶ್ ಭಾಗವಹಿಸಿದ್ದರು.
"ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡರಿಂದ ವಿವರಣೆ ಕೇಳಲಾಗುವುದು. ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಬಿಜೆಪಿ ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶವನ್ನು ಕಟ್ತುತ್ತಿದೆಯೇ ಹೊರತು ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.