ಕೇರಳ, ನ. 29 (daijiworldews/HR): ದೇಶದಲ್ಲಿ ಸಲಿಂಗಿಗಳ ಮದುವೆಗೆ ಇನ್ನೂ ಮಾನ್ಯತೆ ಸಿಗದಿದ್ದರೂ, ಹಲವರು ಮದುವೆಯನ್ನೂ ಆಗಿದ್ದಾರೆ. ಇದೀಗ ಕೇರಳದಲ್ಲಿ ಈಗ ಇಬ್ಬರು ಯುವತಿಯರು ಪೋಷಕರ ವಿರೋಧವನ್ನೆಲ್ಲ ಧಿಕ್ಕರಿಸಿ ಒಂದಾಗಿರುವ ಘಟನೆ ನಡೆದಿದೆ.
ನಮಗೆ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದು ಇದೀಗ ಅವರಿಗೆ ಜಯ ಸಿಕ್ಕಿದ್ದು, ಸಲಿಂಗಿ ಯುವತಿಯರಿಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.
ಇನ್ನು ಹೊಸ ಲೆಹೆಂಗಾ ತೊಟ್ಟು, ಆಭರಣಗಳನ್ನು ಧರಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿಕೊಂಡಿದ್ದು, ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಧಿಲಾ ನಸ್ರೀನ್ ಮತ್ತು ಫಾತಿಮಾ ನೂರ್ ಶಾಲಾ ದಿನಗಳಿಂದಲೂ ಸ್ನೇಹಿತೆಯರಾಗಿದ್ದು, ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಕ್ಕೆ ಕುಟುಂಬದ ವಿರೋಧ ಹೆಚ್ಚಾದ ಬೆನ್ನಲ್ಲೇ ಇದೇ ವರ್ಷ ಮೇ ತಿಂಗಳಲ್ಲಿ, ಫಾತಿಮಾ ಮತ್ತು ಅಧಿಲಾ ಇಬ್ಬರೂ ಕೇರಳದ ಕೊಯಿಕ್ಕೊಡ್ ಗೆ ಹೋಗಿ, ಅಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಆಶ್ರಯ ಕೇಂದ್ರದಲ್ಲಿ ವಾಸವಾಗಿದ್ದರು. ಆಗಲೂ ಮನೆಯವರು ಬಿಡಲಿಲ್ಲ. ಇದರ ವಿರುದ್ದ ಅಧಿಲಾ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಫಾತಿಮಾ ಬೇಕು, ನಾವು ಇಬ್ಬರೂ ಜತೆಯಾಗಿರಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಳು
ಇನ್ನು ಕೋರ್ಟ್ ನಲ್ಲಿ ಇವರಿಗೆ ಗೆಲುವಾಗಿದ್ದು, ಮುಂದಿನ ದಿನಗಳಲ್ಲಿ ಮದುವೆ ಆಗುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.