ನವದೆಹಲಿ, ನ 28 (DaijiworldNews/HR): ಆರೋಪಿ ಅಫ್ತಾಬ್ ಪೂನಾವಾಲಾ ಶ್ರದ್ಧಾ ವಾಲ್ಕರ್ ಅವರ ದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು 5-6 ಇಂಚು ಉದ್ದದ ಐದು ಚಾಕುಗಳನ್ನು ವಶಪಡಿಸಿಕೊಂಡಿದ್ದು, ಈ ಚಾಕುಗಳನ್ನು ಅಪರಾಧಕ್ಕೆ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೊಲೆಯ ನಂತರ ಡೇಟಿಂಗ್ ಆಪ್ನಲ್ಲಿ ಮತ್ತೊಬ್ಬ ಯುವತಿಯ ಜತೆ ಅಫ್ತಾಬ್ ಸ್ನೇಹ ಬೆಳೆಸಿದ್ದು, ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದು, ಆ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್ ಮತ್ತು ಕಪಾಟುಗಳಲ್ಲಿ ಇರಿಸಿದ್ದ ಎಂದು ಈ ಹಿಂದೆ ತನಿಖೆಯಿಂದ ಬೆಳಕಿಗೆ ಬಂದಿತ್ತು.
ಇನ್ನು ಶ್ರದ್ದಾ ಹತ್ಯೆಯ ಬಳಿಕ ಆತ ಡೇಟಿಂಗ್ ಮಾಡುತ್ತಿದ್ದ ಯುವತಿ ವೈದ್ಯೆಯಾಗಿದ್ದು, ಶ್ರದ್ದಾ ವಾಕರ್ ಉಂಗುರವನ್ನು ಅಫ್ತಾಭ್ ವೈದ್ಯೆಗೆ ಉಡುಗೊರೆಯಾಗಿ ನೀಡಿದ್ದಾನೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಪೂನಾವಾಲಾ ಶ್ರದ್ಧಾರನ್ನು ಕತ್ತು ಹಿಸುಕಿ ಕೊಂದಿದ್ದು, ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್ನಲ್ಲಿ ಇರಿಸಿದ್ದ.