ಬೆಂಗಳೂರು, ನ 28 (DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದ ವಿಸ್ತರಣೆಯ ಸುಳಿವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳಲ್ಲಿ ಮತ್ತೆ ಸಂಪುಟ ಸೇರುವ ನಿರೀಕ್ಷೆ ಗರಿಗೆದರಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೇ ಭೇಟಿಯಾಗುವ ಉದ್ದೇಶದಿಂದಲೇ ದೆಹಲಿಗೆ ತೆರಳುತ್ತಿರುವುದಾಗಿ ಹೇಳುವ ಮೂಲಕ ಸಿಎಂ ಸಂಪುಟ ವಿಸ್ತರಣೆ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಿಂದ ದಿಲ್ಲಿಗೆ ನಿರ್ಗಮಿಸುವುದಕ್ಕೂ ಮೊದಲು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಮುಖವಾಗಿ ನಡ್ಡಾ ಅವರನ್ನೇ ಭೇಟಿ ಮಾಡುವ ಉದ್ದೇಶದಿಂದ ದಿಲ್ಲಿಗೆ ಹೋಗುತ್ತಿದ್ದೇನೆ. ಆದರೆ, ಭೇಟಿಗೆ ಇನ್ನೂ ಅವರು ಸಮಯ ಕೊಟ್ಟಿಲ್ಲ. ಮೀಟ್ ಮಾಡಲಿಕ್ಕೆ ಸಮಯ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಗುಜರಾತ್ ಚುನಾವಣೆ ಒಂದು ಹಂತ ತಲುಪಿದ ಬಳಿಕ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು.
ಹೀಗಾಗಿ ಸಂಪುಟ ವಿಸ್ತರಣೆ ಆದರೆ ಈಗಿರುವ ಖಾಲಿ ಸ್ಥಾನಗಳನ್ನು ತುಂಬಲಿದ್ದಾರೋ ಅಥವಾ ಕೆಲವರಿಗೆ ಕೊಕ್ ಕೊಟ್ಟು ಹೊಸಬರಿಗೆ ಅವಕಾಶ ಮಾಡಿಕೊಡುತ್ತಾರೋ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.