ನವದೆಹಲಿ, ನ 27 (DaijiworldNews/DB): 2023ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರನ್ನು ಭಾರತ ಆಹ್ವಾನಿಸಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಹಿನ್ನೆಲೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಜನವರಿ 26 ಭಾರತದ ಗಣರಾಜ್ಯೋತ್ಸವ ದಿನಾಚರಣೆಗೆ ಅತಿಥಿಯಾಗಲಿದ್ದಾರೆ. ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ನ ಅಧ್ಯಕ್ಷರು ನಮ್ಮ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರುತ್ತಿರುವುದು ಇದೇ ಮೊದಲು ಎಂದು ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಕ್ಟೋಬರ್ 16ರಂದು ಈಜಿಪ್ಟ್ಗೆ ಅಧಿಕೃತ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಧ್ಯಕ್ಷರನ್ನು ಕೈರೋದಲ್ಲಿ ಭೇಟಿಯಾಗಿ ಗಣರಾಜ್ಯೋತ್ಸವಕ್ಕೆ ಔಪಚಾರಿಕ ಆಹ್ವಾನ ನೀಡಿದ್ದರು. ಇನ್ನು ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆ ಮುಂದಿನ ವರ್ಷ ನಡೆಯಲಿದ್ದು, ಇದಕ್ಕೆ ಆಹ್ವಾನಿಸಲಾದ ಒಂಬತ್ತು ಅತಿಥಿ ರಾಷ್ಟ್ರಗಳಲ್ಲಿ ಈಜಿಪ್ಟ್ ಕೂಡಾ ಒಂದು.
2020ರ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಅತಿಥಿಯಾಗಿದ್ದರು. ಆ ಬಳಿಕ ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಕಾಲ ಮುಖ್ಯ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ. ಮುಖ್ಯ ಅತಿಥಿಯಾಗಿ ದೇಶದ ನಿಕಟ ಮಿತ್ರರಾಷ್ಟ್ರಗಳನ್ನು ಆಹ್ವಾನಿಸುವುದು ಗೌರವದ ಸಂಕೇತವಾಗಿದೆ.