ಅಸ್ಸಾಂ, ನ 27 (DaijiworldNews/HR): ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿರುವ ಐರನ್-ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿದ ಐವತ್ತಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಪತ್ಸಾಕು ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಟೌ ಉಪ ಕೇಂದ್ರದ ಆರೋಗ್ಯ ಕಾರ್ಯಕರ್ತರ ತಂಡ ಖೇರಾನಿಪಥರ್ ಪ್ರಾಥಮಿಕ ಶಾಲೆಯ 75 ಮತ್ತು ನಿಮಾಲಿಯಾ ಪ್ರಾಥಮಿಕ ಶಾಲೆಯ 26 ವಿದ್ಯಾರ್ಥಿಗಳಿಗೆ ಐಎಫ್ಎ ಮಾತ್ರೆಗಳನ್ನು ವಿತರಿಸಿದ್ದು, ಮಾತ್ರೆ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ಸೋನಾರಿ ಸಿವಿಲ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ ಬಳಿಕ ಮನೆಗೆ ಕಳುಹಿಸಿಕೊಡಲಾಯಿತು ಎಂದು ಹೇಳಿದ್ದಾರೆ.
ಇನ್ನು ಶಿಕ್ಷಕರ ಸಮ್ಮುಖದಲ್ಲಿ ಮಾತ್ರೆಗಳನ್ನು ವಿತರಿಸಲಾಗಿದ್ದು, ಮಕ್ಕಳು ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.