ಬೆಂಗಳೂರು, ನ 26 (DaijiworldNews/DB): ಸುರತ್ಕಲ್ ಟೋಲ್ಗೇಟ್ ರದ್ದುಪಡಿಸಿ ಹೆಜಮಾಡಿ ಟೋಲ್ನಲ್ಲಿ ದುಪ್ಪಟ್ಟು ಹಣ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸಂಸದ ನಳಿನ್ಕುಮಾರ್ ಕಟೀಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಾವಳಿಯ ಜನರು ಸಂಸದರ ಕಾರು ಅಲ್ಲಾಡಿಸಿದ ಕಾರಣಕ್ಕೆ ಕರಾವಳಿಗರ ಮೇಲೆ ಬಹಿರಂಗವಾಗಿ ಸೇಡು ತೀರಿಸಿಕೊಂಡದ್ದನ್ನು ಒಪ್ಪಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿ.ಕೆ. ಹರಿಪ್ರಸಾದ್, ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗಪಡಿಸಬೇಕು. ವಾಹನ ಸವಾರರ ಬೆವರಿನ ಹಣವನ್ನ ಜಿಗಣೆಯಂತೆ ರಕ್ತ ಹೀರುತ್ತಿದ್ದ ಸುರತ್ಕಲ್ ಟೋಲ್ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ? ಎಂದು ಪ್ರಶ್ನೆ ಎಸೆದಿದ್ದಾರೆ.
ಅಕ್ರಮ ಟೋಲ್ಗೇಟ್ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ರೆ, ತಾವು ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆ ಮರೆಯ ಕಸರತ್ತನ್ನ ಬಹಿರಂಗಪಡಿಸುತ್ತಿರಾ? ಅಥವಾ ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನ ಒಪ್ಪಿಕೊಳ್ಳುತ್ತಿರಾ? ಎಂದು ಕೇಳಿದ್ದಾರೆ.
ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್ಗೇಟ್ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ ಎಂದು ಸವಾಲೊಡ್ಡಿರುವ ಅವರು, ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು ಎಂದು ಕಿಡಿ ಕಾರಿದ್ದಾರೆ.