ಬೇಗುಸರಾಯ್, ನ 26 (DaijiworldNews/DB): ರೈಲ್ವೇ ಯಾರ್ಡ್ಗೆ ಸುರಂಗ ಕೊರೆದು ಅಲ್ಲಿ ಇರಿಸಲಾಗಿದ್ದ ರೈಲಿನ ಡೀಸೆಲ್ ಎಂಜಿನನ್ನು ಕಳ್ಳರು ಕಳವುಗೈದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಗರ್ಹರಾ ರೈಲ್ವೇ ಯಾರ್ಡ್ನಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಬರೌನಿ ಪೊಲೀಸರು ಬಂಧಿಸಿದ್ದಾರೆ.
ಈ ಯಾರ್ಡ್ನಲ್ಲಿ ರೈಲಿನ ಡೀಸೆಲ್ ಎಂಜಿನ್ನ್ನು ರಿಪೇರಿಗಾಗಿ ಇಡಲಾಗಿತ್ತು. ಭಾಗಶಃ ಎಂಜಿನ್ ಇದೀಗ ಕಳ್ಳರ ಪಾಲಾಗಿದೆ. ಇವೆಲ್ಲವನ್ನೂ ಗೋಣಿಚೀಲಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಘಟನೆ ಸಂಬಂಧ ಬಂಧಿತರಾಗಿರುವ ಮೂವರು ವಿಚಾರಣೆ ವೇಳೆ ಸ್ಕ್ರ್ಯಾಪ್ ಗೋಡೌನ್ನ ಮಾಲಕರ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಮುಜಾಫರ್ಪುರದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಇನ್ಸ್ಪೆಕ್ಟರ್ ಪಿ.ಎಸ್. ದುಬೆ ತಿಳಿಸಿದ್ದಾರೆ.
ಇನ್ನು ಬಂಧಿತರು ನೀಡಿರುವ ಮಾಹಿತಿಯಾಧರಿಸಿ ಸ್ಕ್ರ್ಯಾಪ್ ಗೋಡೌನ್ನಲ್ಲಿ ಶೋಧ ನಡೆಸಲಾಗಿದ್ದು, ರೈಲುಗಳಲ್ಲಿ ಬಳಸುವ ಉಪಕರಣಗಳ 13 ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್ಗಳ ಚಕ್ರಗಳು, ಭಾರವಾದ ಕಬ್ಬಿಣದಿಂದ ಮಾಡಿದ ರೈಲ್ವೇ ಬಿಡಿಭಾಗಗಳು ಈ ಚೀಲಗಳಲ್ಲಿದ್ದವು ಎಂದುವರು ವಿವರಿಸಿದ್ದಾರೆ.
ಸ್ಕ್ರ್ಯಾಪ್ ಗೋಡೌನ್ ಮಾಲಕ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸ್ಟೀಲ್ ಬ್ರಿಡ್ಜ್ಗಳನ್ನು ಬಿಚ್ಚಿ ಅವುಗಳ ಬಿಡಿಭಾಗಗಳನ್ನು ಕಳವು ಮಾಡುವಲ್ಲಿ ಕೂಡಾ ಈ ಗ್ಯಾಂಗ್ ತೊಡಗಿಸಿಕೊಂಡಿರುವ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ.