ನವದೆಹಲಿ, ನ 26 (DaijiworldNews/MS): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಮತ್ತೊಂದು ವಿಡಿಯೋ ಹೊರಬಿದ್ದಿದೆ.
ತಿಹಾರ್ ಜೈಲಿನೊಳಗೆ ಸಚಿವ ಜೈನ್ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಹಲವು ಸಿಸಿಟಿವಿ ದೃಶ್ಯಾವಳಿಗಳು ಒಂದರ ಹಿಂದೊಂದು ಬರುತ್ತಿರುವುದರ ಮಧ್ಯೆ, ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರನ್ನು ತಮ್ಮ ಜೈಲಿನ ಕೊಠಡಿಯೊಳಗೆ ಭೇಟಿಯಾಗುತ್ತಿರುವುದನ್ನು ತೋರಿಸುವ ಹೊಸ ವೀಡಿಯೊ ಶನಿವಾರ ಹೊರಬಿದ್ದಿದೆ.
ಜೈಲಿನಲ್ಲಿ ಜೈನ್ ದರ್ಬಾರ್ ನಡೆಸುತ್ತಿದ್ದು, ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಹಾಗೂ ಹೋಟೆಲ್ ತಿಂಡಿ ತಿನ್ನುತ್ತಿದ್ದ ಸಚಿವರ ವಿಡಿಯೋಗಳು ವೈರಲ್ ಆಗಿದ್ದವು
ರಾಜಕೀಯ ಎದುರಾಳಿಗಳ ಕೆಂಗಣ್ಣಿಗೆ ಬಿದ್ದಿರುವ ಜೈನ್, ಮಾಧ್ಯಮಗಳಿಗೆ ತನ್ನ ಸೆಲ್ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು "ಸೋರಿಕೆ" ಮಾಡುವುದನ್ನು ನಿಲ್ಲಿಸುವಂತೆ ದೆಹಲಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ.