ಶಿವಮೊಗ್ಗ, ನ 25 (DaijiworldNews/DB): ಬಿಜೆಪಿಯು ಸಿದ್ದಾಂತ ಮತ್ತು ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಮೌಲ್ಯಾಧಾರಿತ ರಾಜಕಾರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ದೇಶದ ವಿಚಾರ ಬಂದಾಗ ದೇಶ ಮೊದಲು, ಪಕ್ಷ ನಂತರ ಎಂಬ ನಿಲುವು ಬಿಜೆಪಿಯದ್ದು. ಬಿಜೆಪಿ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ವ್ಯಾಖ್ಯಾನಗಳು ಅವರ ರಾಜಕೀಯ ದೃಷ್ಟಿಕೋನಗಳಿಗೆ ತಕ್ಕಂತಿದೆಯೇ ಹೊರತು ವಾಸ್ತವ ಹಾಗಿಲ್ಲ ಎಂದರು.
ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು. ರೈತರು, ಕೂಲಿ ಕಾರ್ಮಿಕರು, ಮಹಿಳೆಯರ ಆಶಾಕಿರಣವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಸಂವಿಧಾನ ಬದಲಿಸಲು ಬಿಜೆಪಿ ಹೊರಟಿದೆ ಎಂದು ಕೆಲವರು ಆಪಾದಿಸಿದ್ದರು. ಆದರೆ ವಾಸ್ತವದಲ್ಲಿ ಅದೇ ಸಂವಿಧಾನವನ್ನು ದೃಢವಾಗಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದವರು ಪ್ರತಿಪಾದಿಸಿದರು. ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ಸಿಗರು ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿರುವಂತದ್ದು. ಅವರಿಗೆ ಕೋರ್ಟ್ನಲ್ಲಿ ವಾದಿಸಲೂ ಅವಕಾಶ ನೀಡದ ಪಕ್ಷ ಕಾಂಗ್ರೆಸ್. ಅವರ ನಿಧನರಾದಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಒಂದಿಂಚು ಜಾಗ ನೀಡಿಲ್ಲ. ಆದರೆ ಈಗ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಕುಟುಕಿದರು.