ನವದೆಹಲಿ, ನ 25 (DaijiworldNews/MS): ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಎಲ್ಜಿಬಿಟಿಕ್ಯೂ+ ಸಮುದಾಯದ ಸಲಿಂಗ ಜೋಡಿಯೊಂದು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದುವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸಲು ಆದೇಶಿಸಿದೆ.
ಹೈದರಾಬಾದ್ನಲ್ಲಿ ನೆಲೆಸಿರುವ ಸಲಿಂಗ ಜೋಡಿಯಾದ ಸುಪ್ರಿಯೊ ಚಕ್ರವರ್ತಿ ಮತ್ತು ಅಭಯ್ ದಂಗ್ ಸಲ್ಲಿಸಿರುವ ಪ್ರಮುಖ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಎಲ್ಜಿಬಿಟಿಕ್ಯೂ+ ಸಮುದಾಯದವರು ತಮ್ಮಿಷ್ಟದವರನ್ನು ವಿವಾಹವಾಗುವ ಮೂಲಭೂತ ಹಕ್ಕನ್ನು ಜಾರಿಗೊಳಿಸಬೇಕು ಎಂದು ಸುಪ್ರಿಯೊ ಮತ್ತು ಅಭಯ್ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿತ್ತು.
ನಾವು ಇಬ್ಬರು ಕಳೆದ 17 ವರ್ಷಗಳಿಂದ ಪರಸ್ಪರ ಪ್ರೀತಿಸಿ, ಮದುವೆಯಾಗಿದ್ದೇವೆ. ಈಗ ನಾವು ಇಬ್ಬರು ಮಕ್ಕಳನ್ನು ಬೆಳೆಸುತ್ತಿದ್ದೇವೆ. ಆದರೆ ನಮ್ಮ ವಿವಾಹವನ್ನು ಕಾನೂನು ಬದ್ಧಗೊಳಿಸಲಾಗುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳ ನಡುವಿನ ಸಂಬಂಧವೂ ಕಾನೂನು ಬದ್ಧವಾಗುತ್ತಿಲ್ಲ‘ ಎಂದು ಅರ್ಜಿದಾರರು ಹೇಳಿದ್ದಾರೆ.