ನವದೆಹಲಿ, ನ 25 (DaijiworldNews/DB): ಕಡಿಮೆ ಕೂದಲಿರುವ ಪುರುಷ ಸಿಬಂದಿ ತಲೆ ಕೂದಲು ಬೋಳಿಸಿಕೊಳ್ಳಬೇಕು..ಮಹಿಳೆಯರು ಚಿನ್ನ, ವಜ್ರ ಬಿಟ್ಟು ಬೇರೆ ಆಭರಣ ಧರಿಸುವಂತಿಲ್ಲ..ಇದು ಟಾಟಾ ಒಡೆತನದ ಏರ್ ಇಂಡಿಯಾ ತನ್ನ ವಿಮಾನ ಸಿಬಂದಿಗೆ ವಿಧಿಸಿದ ಹೊಸ ರೂಲ್ಸ್.
ಏರ್ ಇಂಡಿಯಾ ಸಂಸ್ಥೆಯು ತನ್ನ ವಿಮಾನದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಕಡಿಮೆ ಕೂದಲು ಹೊಂದಿರುವ ಪುರುಷ ಸಿಬಂದಿ ತಲೆ ಕೂದಲನ್ನು ಸಂಪೂರ್ಣ ಬೋಳಿಸಿಕೊಳ್ಳಬೇಕು. ಅಲ್ಲದೆ ಪುರುಷರಾಗಲೀ, ಮಹಿಳೆಯರಾಗಲೀ ಕೂದಲಿಗೆ ಬೂದು ಬಣ್ಣ ಹಾಕುವಂತಿಲ್ಲ. ಹೆನ್ನಾ ಮತ್ತಿತರ ಫ್ಯಾಷನ್ ಕಲರ್ಗಳನ್ನು ಕೂದಲಿಗೆ ಅಳವಡಿಸಲು ಅವಕಾಶವಿಲ್ಲ. ಪ್ರಾಕೃತಿಕ ಬಣ್ಣವನ್ನಷ್ಟೇ ಹಾಕಬಹುದು.
ಇನ್ನು ಪುರುಷ ಸಿಬಂದಿ ಮದುವೆ ಉಂಗುರ ಹೊರತುಪಡಿಸಿ ಬೇರೆ ಯಾವುದನ್ನೂ ಬಳಸುವಂತಿಲ್ಲ. ಆ ಉಂಗುರದಲ್ಲಿಯೂ ವಿಪರೀತ ವಿನ್ಯಾಸಗಳಿರಬಾರದು. ಇನ್ನು ಸಿಖ್ ಧರ್ಮದ ಸಿಬಂದಿ 0.5 ಸೆ.ಮೀ. ಒಳಗಿನ ಧಾರ್ಮಿಕ ಬ್ರೇಸ್ಲೆಟ್ ಮಾತ್ರ ಧರಿಸಲು ಅವಕಾಶವಿದೆ.
ಮಹಿಳಾ ಸಿಬಂದಿ ವಿಶೇಷ ವಿನ್ಯಾಸವಿಲ್ಲದ ಚಿನ್ನ ಮತ್ತು ವಜ್ರದ ಆಭರಣ ಧರಿಸಬಹುದು. ಆದರೆ ಮುತ್ತಿನ ಆಭರಣ ಅಥವಾ ಇತರ ಯಾವುದೇ ಮಾದರಿಯ ಆಭರಣಗಳನ್ನು ಧರಿಸಲು ಅವಕಾಶವಿಲ್ಲ.
ಇನ್ನು ಸಂಸ್ಥೆಯ ಈ ಮಾರ್ಗಸೂಚಿಗಳು ಸಿಬಂದಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಾರ್ಗಸೂಚಿಗಳನ್ನು ಪಾಲಿಸುವುದು ಸುಲಭವಲ್ಲ, ಇದು ತುಂಬಾ ಕಠಿಣವಾಗಿದೆ ಎಂದು ಏರ್ ಇಂಡಿಯಾ ಸಿಬಂದಿ ಅಸಮಾಧಾನ ಹೊರ ಹಾಕಿದ್ದಾರೆ.