ಪೂಂಚ್, ನ 24 (DaijiworldNews/DB): ಎಲ್ಪಿಜಿ ಸಿಲಿಂಡರ್ಗೆ ಬೆಂಕಿ ತಗುಲಿ ಸ್ಪೋಟಗೊಂಡ ಪರಿಣಾಮ ತಾಯಿ ಮತ್ತು ಮಗ ಸಜೀವದಹನವಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಹಮೀದಾ ಬೇಗಂ (40) ಮತ್ತು ಅಕಿಬ್ ಅಹ್ಮದ್ (4) ಮೃತ ದುರ್ದೈವಿಗಳು. ಸುರನಕೋಟೆ ಉಪವಿಭಾಗದ ಚಂದಿಮಾರ್ಹ್ ಗ್ರಾಮದಲ್ಲಿ ಘಟನೆ ನಡೆದಿದೆ. ಇನ್ನು ಮನೆಯಲ್ಲಿದ್ದ 12 ಜಾನುವಾರುಗಳು ಸಹ ಘಟನೆಯಲ್ಲಿ ಸಾವಿಗೀಡಾಗಿವೆ ಎಂದು ಸುರನ್ಕೋಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ತನ್ವೀರ್ ಜೀಲಾನಿ ತಿಳಿಸಿದ್ದಾರೆ.
ಮೃತ ಮಹಿಳೆಯ ಪತಿ ಮತ್ತು ಇನ್ನಿಬ್ಬರು ಮಕ್ಕಳೂ ಮನೆಯಲ್ಲಿದ್ದು, ಘಟನೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿರುವುದಾಗಿ ವರದಿಯಾಗಿದೆ.