ಧಾರವಾಡ, ನ 24 (DaijiworldNews/DB): ರಮೇಶ್ ಜಾರಕಿಹೊಳಿ ಶೀಘ್ರ ಮಂತ್ರಿ ಆಗುತ್ತಾರೆ. ಮುಂದೆ ಮಂತ್ರಿಮಂಡಲ ವಿಸ್ತರಣೆಯಾಗಲಿದ್ದು, ಅವರ ಹೆಸರೇ ಮೊದಲಿಗೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಯಾರೇ ಬೇರೆ ಪಕ್ಷಕ್ಕೆ ಹೋದರೂ ರಮೇಶ್ ಜಾರಕಿಹೊಳಿ ಹೋಗಲಾರರು ಎಂಬ ವಿಶ್ವಾಸ ನನಗಿದೆ. ಅವರು ಶೀಘ್ರ ಮಂತ್ರಿ ಆಗಲಿದ್ದಾರೆ. ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂದರು.
ರಾಜ್ಯದಲ್ಲಿ 160 ಸಾಮಾನ್ಯ ಕ್ಷೇತ್ರಗಳಿದ್ದರೂ, ಕಾಂಗ್ರೆಸ್ನ ಸ್ವಯಂಘೋಷಿತ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಒಂದೇ ಒಂದು ಕ್ಷೇತ್ರ ಸಿಕ್ಕಿಲ್ಲ. ಒಮ್ಮೆ ಕೋಲಾರ, ಇನ್ನೊಮ್ಮೆ ಚಾಮರಾಜನಗರ, ಚಾಮುಂಡೇಶ್ವರಿ, ಬೀಳಗಿ, ಬಾದಾಮಿ ಹೀಗೆ ಓಡಾಡುವ ಅವರ ಸ್ಥಿತಿ ಅಂಡುಸುಟ್ಟ ಬೆಕ್ಕಿನಂತಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ, ಡಿಕೆಶಿ ಸ್ಪರ್ಧಿಸುವುದು ಬೇಡ ಎಂಬ ಸಂತೋಷ್ ಲಾಡ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಬ್ಬರಿಗೂ ಸೋಲು ನಿಶ್ಚಿತ ಎಂಬುದು ಸಂತೋಷ್ ಲಾಡ್ಗೆ ಗೊತ್ತಾಗಿರಬೇಕು. ಅದಕ್ಕೇ ಹಾಗೆ ಹೇಳಿರಬಹುದು ಎಂದರು.
ಧಾರವಾಡಕ್ಕೆ ಬಂದರೆ ನೋಡಿಕೊಳ್ಳುತ್ತೇವೆಂದು ಒಬ್ಬ ಹೇಳಿದ್ದ. ಆ ಸವಾಲು ತೆಗೆದುಕೊಂಡು ಇಲ್ಲಿಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ಇದು ಪಾಕಿಸ್ತಾನವಲ್ಲ, ಹಿಂದೂಸ್ಥಾನ. ಧಾರವಾಡದಲ್ಲಿ ಅವರು ಹೇಳಿದ ಚೌಕ್ನಲ್ಲಿ ಪೆಂಡಾಲ್ ಹಾಕಿ ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದರು.
ಮಂಗಳೂರಿನಲ್ಲಿ ಕುಕ್ಕರ್ ಸ್ಪೋಟ ವಿಚಾರ ಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಘಟನೆಯ ತನಿಖೆಯಲ್ಲಿ ಯಾವುದೇ ವೈಫಲ್ಯ ಆಗಿಲ್ಲ. ಹಿಂದೂ ಹೆಸರು ಹೇಳಿಕೊಂಡು ವಂಚಿಸುವವರ ಮೇಲೆ ಕ್ರಮ ಆಗುತ್ತದೆ ಎಂದರು.
ಪರೇಶ ಮೇಸ್ತಾ ಸಾವು ಪ್ರಕರಣ ಸಂಬಂಧಿಸಿ ಬಿ ರಿಪೋರ್ಟ್ ಸಲ್ಲಿಕೆಯಾಗಿರುವ ಕುರತಂತೆ ಮಾತನಾಡಿದ ಅವರು, ಇನ್ನೊಮ್ಮೆ ತನಿಖೆ ಅಗತ್ಯವಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪರಿಶೀಲಿಸಲು ಸಿಬಿಐಗೆ ಮನವಿ ಮಾಡಿದೆ ಎಂದು ತಿಳಿಸಿದರು.