ಮಹಾರಾಷ್ಟ್ರ, ನ 24 (DaijiworldNews/DB): ಮೂಢನಂಬಿಕೆಗಳ ವಿರುದ್ದ ಸಂದೇಶ ಸಾರುವ ಸಲುವಾಗಿ ವ್ಯಕ್ತಿಯೊಬ್ಬರು ತಮ್ಮ ಜನ್ಮ ದಿನವನ್ನು ಸ್ಮಶಾನದಲ್ಲಿ ಆಚರಿಸಿಕೊಂಡ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ ನಿವಾಸಿ ಗೌತಮ್ ರತನ್ ಮೋರೆ ಅವರೇ ಸ್ಮಶಾನದಲ್ಲಿ ಜನ್ಮ ದಿನ ಆಚರಿಸಿಕೊಂಡವರು. ನವೆಂಬರ್ 19 ರಂದು 54ನೇ ವರ್ಷಕ್ಕೆ ಕಾಲಿಟ್ಟ ಮೋರೆ ಅವರು ಶನಿವಾರ ರಾತ್ರಿ ಮೊಹಾನೆ ಸ್ಮಶಾನದಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಆಗಮಿಸಿದ ಅತಿಥಿಗಳಿಗೆ ಕೇಕ್ ಮತ್ತು ಬಿರಿಯಾನಿ ಊಟ ನೀಡಲಾಯಿತು. ಇನ್ನು ದೊಡ್ಡ ಬ್ಯಾನರ್ ಅಡಿಯಲ್ಲಿ ಮೋರೆ ಅವರು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 40 ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಮಂದಿ ಜನ್ಮ ದಿನಾಚರಣೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರತನ್ ಮೋರೆ, ಸಮಾಜ ಸೇವಕಿ ಸಿಂಧೂತಾಯಿ ಸಪ್ಕಲ್ ಮತ್ತು ಕುರುಡು ನಂಬಿಕೆಗಳು, ಮಾಟಮಂತ್ರ ಹಾಗೂ ಮೂಢನಂಬಿಕೆಗಳ ವಿರುದ್ಧ ಪ್ರಚಾರ ಮಾಡಿದ ಖ್ಯಾತ ವಿಚಾರವಾದಿ ದಿವಂಗತ ನರೇಂದ್ರ ದಾಭೋಲ್ಕರ್ ಅವರಿಂದ ಸ್ಪೂರ್ತಿ ಪಡೆದು ತನ್ನ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿಕೊಂಡಿದ್ದೇನೆ ಎಂದರು.