ಬೆಂಗಳೂರು, ನ 24 (DaijiworldNews/DB): ಪ್ರತಿ ಜಿಲ್ಲೆಗೊಂದರಂತೆ ರಾಜ್ಯದ ಎಲ್ಲಾ ಗೋಶಾಲೆಗಳಿಂದ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಪಶುಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಗುರುವಾರ ಮಾತನಾಡಿದ ಅವರು, ಗೋವುಗಳ ಸಂರಕ್ಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನನ್ನನ್ನು ನೇಮಕ ಮಾಡುವ ಮೂಲಕ ಗೋ ರಕ್ಷಣೆ ವಿಚಾರದಲ್ಲಿ ನನ್ನ ಜವಾಬ್ದಾರಿಯನ್ನು ಸರ್ಕಾರ ಹೆಚ್ಚಿಸಿದೆ. ಸಿಎಂ ಬೊಮ್ಮಾಯಿಯವರು ತಮ್ಮ ಹುಟ್ಟುಹಬ್ಬದಂದು 11 ಗೋವು ದತ್ತು ಪಡೆಯುವ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಸಚಿವ ಪ್ರಭು ಚವ್ಹಾಣ್ ಅವರಂತೆ ನಾನೂ ಪ್ರತಿ ಜಿಲ್ಲೆಗೊಂದರಂತೆ 31 ಗೋವುಗಳನ್ನು ಗೋಶಾಲೆಗಳಿಂದ ದತ್ತುಪಡೆಯುತ್ತೇನೆ ಎಂದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ 100 ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ. ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮತ್ತು ಸಾರ್ವಜನಿಕರ ಸಹಕಾರದಿಂದ ಅವುಗಳನ್ನು ಮುನ್ನಡೆಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಚಿತ್ರನಟ ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರ ವಿತರಿಸಿ, ನೆನಪಿನ ಕಾಣಿಕೆ ನೀಡಿ ಸಚಿವರು ಸನ್ಮಾನಿಸಿದರು. ಇಲಾಖೆ ಕಾರ್ಯದರ್ಶಿ ಡಾ. ಸಲ್ಮಾ ಕೆ. ಫಾಹೀಮ್, ಆಯುಕ್ತೆ ಎಸ್. ಅಶ್ವಥಿ, ಅಪರ ನಿರ್ದೇಶಕ ಡಾ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.