ಖಾಂಡ್ವಾ, ನ 24 (DaijiworldNews/DB): ಮಧ್ಯಪ್ರದೇಶಕ್ಕೆ ಪ್ರವೇಶಿಸಿರುವ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಇಂದು ರಾಹುಲ್ ಗಾಂಧಿಯವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ. ರಾಹುಲ್-ಪ್ರಿಯಾಂಕಾ ಜೊತೆಯಾಗಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜೊತೆಯಾಗಿ ನಡೆದಾಗ ಹೆಜ್ಜೆಗಳು ಬಲವಾಗಿರುತ್ತವೆ ಎಂದು ಬರೆದುಕೊಂಡಿದೆ.
ಬಿಜೆಪಿಯ ಭದ್ರಕೋಟೆಯಾದ ಮಧ್ಯಪ್ರದೇಶಕ್ಕೆ ಬುಧವಾರ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ. ಇಂದು (ಗುರುವಾರ) ಬೆಳಗ್ಗೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬೊರಂಗಾವ್ನಿಂದ ಆರಂಭವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸಹೋದರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರೂ ಪಾಲ್ಗೊಂಡರು. ಯಾತ್ರೆ ಖಾರ್ಗೋನ್ ಪ್ರವೇಶಿಸುವ ಮುನ್ನ ರಾಹುಲ್ ಮತ್ತು ಪ್ರಿಯಾಂಕಾ ಅವರು ಸ್ವಾಂತಂತ್ರ್ಯ ಹೋರಾಟಗಾರ ತಾಂತಿಯಾ ಭೀಲ್ ಜನ್ಮ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಯಾತ್ರೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಜೊತೆಯಾಗಿ ನಡೆದಾಗ ಹೆಜ್ಜೆಗಳು ಬಲವಾಗುತ್ತವೆ ಎಂದು ಬರೆದುಕೊಂಡಿದೆ.
ಮಧ್ಯಪ್ರದೇಶದ ಪ್ರಮುಖ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಮತ್ತು ಅವರ ಮಗ ರೈಹಾನ್ ಕೂಡ ಪಾದಯಾತ್ರೆಯಲ್ಲಿ ಸಾಗಿದ್ದರು.
ಕರ್ನಾಟಕದಲ್ಲಿ ಯಾತ್ರೆ ನಡೆಯುವ ಸಂದರ್ಭದಲ್ಲಿಯೇ ಪ್ರಿಯಾಂಕಾ ಗಾಂಧಿ ವಾಧ್ರಾ ಪಾಲ್ಗೊಳ್ಳುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಕರ್ನಾಟಕದಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ.