ಬೆಂಗಳೂರು, ನ 24 (DaijiworldNews/MS): ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಹೊಸ ವರ್ಷದಿಂದ ಕ್ಯಾಶ್ ಲೆಸ್ ಚಿಕಿತ್ಸೆ ಸೌಲಭ್ಯ ಸಿಗಲಿದೆ.
5.50 ಲಕ್ಷ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಸ್ಥರು ಮಾರಣಾಂತಿಕ ಕಾಯಿಲೆಗಳು ಸೇರಿ 1126 ವಿವಿಧ ಆರೋಗ್ಯ ಸಮಸ್ಯೆಗಳಿಗೆ ರಾಜ್ಯದ 888 ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದ್ದಾರೆ.
ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಎಲ್ಲಾ ವಿಧದ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಲಭ್ಯವಾಗಲಿದ್ದು ಜನವರಿಯಿಂದ ಜಾರಿಯಾಗಲಿದೆ. ನಿವೃತ್ತ ನೌಕರರಿಗೂ ಈ ಸೌಲಭ್ಯ ಸಿಗುವಂತೆ ಮಾಡಲು ಪ್ರಯತ್ನಗಳು ಮುಂದುವರೆದಿವೆ.
ಈ ಹಿಂದೆ ಚಿಕಿತ್ಸೆ ಪಡೆದುಕೊಳ್ಳಲು ಮಾಡಿದ ವೆಚ್ಚ ಮರುಪಾವತಿಗೆ ಹರಸಾಹಸ ಪಡಬೇಕಿತ್ತು. ಮಾತ್ರವಲ್ಲದೇ ಚಿಕಿತ್ಸೆಗೆ ನಿಗದಿಪಡಿಸಿದ್ದ ಮೊತ್ತ ಕೂಡ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ನೌಕರರ ಸಂಘ ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಉಚಿತ ಆರೋಗ್ಯ ಯೋಜನೆಗೆ ಸರ್ಕಾರ ಅಂಗೀಕಾರ ನೀಡಿದ್ದು, ಹೊಸ ವರ್ಷ ಜನವರಿಯಿಂದ ನೌಕರ ಸ್ನೇಹ ಆರೋಗ್ಯ ಯೋಜನೆ ಜಾರಿಯಾಗಲಿದೆ.