ಪಣಜಿ, ನ 23 (DaijiworldNews/DB): ಗೋವಾದಲ್ಲಿರುವ ತನ್ನ ಮನೆಯನ್ನು ಬಾಡಿಗೆ ನೀಡುವುದಾಗಿ ಆನ್ಲೈನ್ನಲ್ಲಿ ಜಾಹೀರಾತು ನೀಡಿದ ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಇದೀಗ ಸಂಕಷ್ಟ ಎದುರಾಗಿದೆ. ಸರ್ಕಾರದ ಅನುಮತಿರಹಿತವಾಗಿ ಜಾಹೀರಾತು ನೀಡಿದ್ದಕ್ಕೆ ಗೋವಾ ಅಧಿಕಾರಿಗಳು ಕ್ರಿಕೆಟಿಗನಿಗೆ ನೋಟಿಸ್ ನೀಡಿದ್ದಲ್ಲದೆ, 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ನವೆಂಬರ್ 18ರಂದು ಗೋವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಯುವರಾಜ್ ಸಿಂಗ್ಗೆ ನೋಟಿಸ್ ಕಳಿಸಿದ್ದು, ಡಿಸೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದರೊಂದಿಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಇದಲ್ಲದೆ ಹೊಟೇಲ್, ಅತಿಥಿ ಗೃಹ, ವಿಲ್ಲಾ ಸಹಿತ ಆತಿಥ್ಯ ನೀಡುವ ಚಟುವಟಿಕೆಗಳನ್ನು ನಡೆಸಲು ನೋಂದಣಿ ಕಡ್ಡಾಯ ಎಂಬುದಾಗಿ ಗೋವಾ ಸರ್ಕಾರ ಸ್ಪಷ್ಟಪಡಿಸಿದೆ.
ಟೂರಿಸ್ಟ್ ಟ್ರೇಡ್ ಆಕ್ಟ್-1982 ರ ಗೋವಾ ನೋಂದಣಿ ಪ್ರಕಾರ ನೋಂದಣಿ ಮಾಡಿದ ಬಳಿಕವೇ ಆತಿಥ್ಯ ಚಟುವಟಿಕೆಗಳಿಗೆ ಕಟ್ಟಡವನ್ನು ಬಳಸಲು ಗೋವಾದಲ್ಲಿ ಅವಕಾಶವಿದೆ. ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಗೋವಾದ ಮೊರ್ಜಿಮ್ನಲ್ಲಿ ಕಾಸಾ ಸಿಂಗ್ ಹೆಸರಿನ ಐಷಾರಾಮಿ ಕಟ್ಟಡ ಹೊಂದಿದ್ದು, ಪ್ರವಾಸಿಗರಿಗೆ ಇದನ್ನು ಬಾಡಿಗೆಗೆ ನೀಡುವುದಾಗಿ ಆನ್ಲೈನ್ನಲ್ಲಿ ಪ್ರಕಟಿಸಿದ್ದರು. ಆದರೆ ಗೋವಾ ಸರ್ಕಾರದ ಅನುಮತಿ ಪಡೆಯದೇ ಅವರು ಈ ಜಾಹೀರಾತು ಪ್ರಕಟಿಸಿದ್ದರು. ನೋಂದಣಿ ಮಾಡದೆ ಜಾಹೀರಾತು ನೀಡಿರುವುದು ಪ್ರವಾಸೋದ್ಯಮ ನಿಯಮಗಳಿಗೆ ವಿರುದ್ದವಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ.