ನವದೆಹಲಿ, ನ 22(DaijiworldNews/MS): ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುವ ವ್ಯಕ್ತಿ ಅತ್ಯಾಚಾರದ ಆರೋಪಿಯಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಹೇಳುವಂತೆ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲಿನ ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಕೆಲ ದಿನಗಳ ಹಿಂದೆ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ತಳ್ಳಿ ಹಾಕಿತ್ತು. ಅಲ್ಲದೆ ಜೈನ್ ಅವರು ಬೆನ್ನು ನೋವಿಗೆ ಫಿಸಿಯೋ ಥೆರಪಿಸ್ಟ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.
ಆದರೆ ಜೈನ್ ಗೆ ಮಸಾಜ್ ಮಾಡುವಾತ ಫಿಸಿಯೋ ಅಲ್ಲ.. ಬದಲಿಗೆ ಆತ ತಿಹಾರ್ ಜೈಲಿನ ಸಹ ಕೈದಿಯಾಗಿದ್ದು ಪೋಕ್ಸೋ ಕಾಯ್ದೆಯ ಆರೋಪಿಯಾಗಿದ್ದಾನೆ. 10 ವರ್ಷದ ಬಾಲಕಿ ಮೇಲೆ ದೌರ್ಜನ್ಯವೆಸಗಿ ಜೈಲು ಪಾಲಾಗಿದ್ದ ಎಂದು ತಿಹಾರ್ ಜೈಲು ಮೂಲಗಳು ತಿಳಿಸಿವೆ.
"ಅತ್ಯಾಚಾರ ಆರೋಪಿ ರಿಂಕು ಸತ್ಯೇಂದ್ರ ಜೈನ್ಗೆ ಮಸಾಜ್ ಮಾಡುತ್ತಿದ್ದರು. ಪೋಕ್ಸೋ ಮತ್ತು ಐಪಿಸಿ 376 ರ ಅಡಿಯಲ್ಲಿ ರಿಂಕು ಆರೋಪಿ. ಹಾಗಾಗಿ ಸತ್ಯೇಂದ್ರ ಜೈನ್ಗೆ ಮಾಲಿಷ್ ನೀಡುತ್ತಿದ್ದ ಫಿಸಿಯೋಥೆರಪಿಸ್ಟ್ ಅಲ್ಲ ರೇಪಿಸ್ಟ್! ಶಾಕಿಂಗ್.. ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಹಿಂದಿನ ಹೇಳಿಕೆಗೆ ತಾವು ಬದ್ಧರಾಗಿದ್ದು, ಅದು ಫಿಸಿಯೋ ಥೆರಪಿ ಎಂದು ಹೇಳಿದ್ದಾರೆ