ಮೇಘಾಲಯ, ನ 22 (DaijiworldNews/HR): ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದ ನಂತರ ನಡೆದ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೇಘಾಲಯದ ಗಡಿಯಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ಸುಮಾರಿಗೆ ಟ್ರಕ್ ಅನ್ನು ತಡೆದಿದ್ದು, ಈ ವೇಳೆ ಟ್ರಕ್ ನಲ್ಲಿದ್ದವರು ಪರಾರಿಯಾಗಲು ಪ್ರಯತ್ನಿಸಿದ್ದರು. ಇವರನ್ನು ಬೆನ್ನಟಿದ ಅರಣ್ಯ ಸಿಬ್ಬಂದಿ ವಾಹನಕ್ಕೆ ಗುಂಡು ಹಾರಿಸಿ ಟೈರ್ ಪಂಕ್ಚರ್ ಮಾಡಿದ್ದು, ಬಳಿಕ ಟ್ರಕ್ ಡ್ರೈವರ್, ಹ್ಯಾಂಡ್ಮ್ಯಾನ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಅರಣ್ಯ ಸಿಬ್ಬಂದಿ ಬಂಧಿಸಿ ಜಿರಿಕೆಂಡಿಂಗ್ ಪೊಲೀಸ್ ಠಾಣೆಗೆ ಕರೆದೋಯ್ದಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಮೇಘಾಲಯದಿಂದ ಕಠಾರಿ ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಅಪಾರ ಸಂಖ್ಯೆಯ ಜನರು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸ್ಥಳದಲ್ಲಿ ಜಮಾಯಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದು, ಅರಣ್ಯ ಸಿಬ್ಬಂದಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.