ಬೆಂಗಳೂರು, ನ 22(DaijiworldNews/MS): ವೋಟರ್ ಲಿಸ್ಟ್ ಡಿಲೀಟ್ ಪ್ರಕರಣದ ಸಂಬಂಧ ನಾಳೆ ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ಕೊಡುವುದಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಿಂದ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಚುನಾವಣಾ ಆಯುಕ್ತರು ನಾಳೆ ಮಧ್ಯಾಹ್ನ ಭೇಟಿಗೆ ಸಮಯ ಕೊಟ್ಟಿದ್ದಾರೆ. ಈ ಹಗರಣದಲ್ಲಿ ಚಿಲುಮೆ ಸಂಸ್ಥೆ ಜೊತೆ ಇನ್ನೂ ಹಲವು ಸಂಸ್ಥೆಗಳು ಶಾಮೀಲಾಗಿವೆ. ನಾಳೆ ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ
ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8,250 ಬೂತ್ಗಳಿವೆ. ಪ್ರತಿ ಬೂತ್ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, 7 ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿ ಮೇಲೂ ಪ್ರಕರಣ ದಾಖಲಿಸಬೇಕು. 27 ಲಕ್ಷ ಮತದಾರರ ಹೆಸರು ತೆಗೆದಿದ್ದು ಹೇಗೆ, ಇದಕ್ಕೆ ಸಹಿ ಹಾಕಿದವರು ಯಾರು ಚಿಲುಮೆ ಸಂಸ್ಥೆಗೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ ಅವುಗಳಿಗೂ ಈ ಚುನಾವಣೆ ಪ್ರಕ್ರಿಯೆಗೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.