ಬೆಂಗಳೂರು, ನ 22(DaijiworldNews/MS):ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ಕಿಡಿ ಹಚ್ಚುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಸಿಎಂ, ಇಂದು ಉಭಯ ರಾಜ್ಯಕನ್ನಡಿಗರು ಹಾಗೂ ಮರಾಠಿಗರು ಪರಸ್ಪರ ಸೌಹಾರ್ದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿ , ಕರ್ನಾಟಕ ಏಕೀಕರಣ, ಗೋವಾ ವಿಮೋಚನೆಗೆ ಹೋರಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಮಾಸಾಶನ ನೀಡುವ ಬಗ್ಗೆ ಈಗಾಗಲೇ ಯೋಜಿಸಲಾಗಿದೆ ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜತ್ ತಾಲೂಕಿನ ಬರಪೀಡಿತ ಪ್ರದೇಶಕ್ಕೆ ಕುಡಿವ ನೀರು ಪೂರೈಸುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದ್ದು ಜತ್ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರಿಸಬೇಕೆಂದು ಠರಾವು ಪಾಸು ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ’ಮಹಾ ಸರ್ಕಾರಕ್ಕೆ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ