ನವದೆಹಲಿ, ನ 22(DaijiworldNews/MS):ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಗರ್ಭಿಣಿ ನಾಯಿಯನ್ನು ನಿರ್ದಯವಾಗಿ ಥಳಿಸಿ ಕೊಂದ ಆರೋಪದಲ್ಲಿ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ಆದ ವೀಡಿಯೊದಲ್ಲಿದ್ದ ಗರ್ಭಿಣಿ ನಾಯಿಯನ್ನು ಬೇಸ್ಬಾಲ್ ಬ್ಯಾಟ್, ಮರದ ಕೋಲುಗಳು ಮತ್ತು ಕಬ್ಬಿಣದ ರಾಡ್ಗಳನ್ನು ಹಿಡಿದುಕೊಂಡು, ತಗಡು ಶೀಟ್ ನಲ್ಲಿ ಮಾಡಿದ ತಾತ್ಕಾಲಿಕ ರೂಂ ನಲ್ಲಿ ನಾಯಿಯನ್ನು ಹೊಡೆಯುತ್ತಾ ಯುವಕರೆಲ್ಲರೂ ನಗುತ್ತಿರುವುದು ದಾಖಲಾಗಿತ್ತು. ಇವರೆಲ್ಲರೂ ಓಖ್ಲಾದ ಡಾನ್ ಬಾಸ್ಕೊ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ನಾಯಿಯನ್ನು ಥಳಿಸಲು ಗುಂಪು ಗುಂಪಾಗಿ ಸೇರುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಾಯಿಯ ಬೊಗಳುವಿಕೆಯಿಂದ ವಿದ್ಯಾರ್ಥಿಗಳು ಸಿಟ್ಟುಗೊಂಡು ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಇದಕ್ಕೂ ಮುನ್ನ ನವೆಂಬರ್ 20 ರಂದು ಪೊಲೀಸರು ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.