ನವದೆಹಲಿ, ನ 19 (DaijiworldNews/MS): ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮೇ 30ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯಾವಳಿಯೊಂದು ವೈರಲ್ ಆಗಿದ್ದು , ಇದಕ್ಕೆ ಬಿಜೆಪಿ ಕಿಡಿಕಾರಿದೆ.
ತಿಹಾರ್ ಜೈಲಿನಲ್ಲಿ ಜೈನ್ ಅವರಿಗೆ ವಿಶೇಷ ಆತಿಥ್ಯ ಲಭ್ಯವಾಗುತ್ತಿದೆ ಎಂದು ಕಳೆದ ವಾರ ಜಾರಿ ನಿರ್ದೇಶನಾಲಯ ದೂರಿತ್ತು. ಅಲ್ಲದೆ ತಿಹಾರ್ ಜೈಲಿನಿಂದ ಸಚಿವರನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಭಾರತೀಯ ಜನತಾ ಪಾರ್ಟಿ ಒತ್ತಾಯಿಸಿತ್ತು.
ವೈರಲ್ ಆದ ವಿಡಿಯೋದಲ್ಲಿ ಜೈನ್ ಕೆಲ ದಾಖಲೆ ಓದುತ್ತಾ ಮಲಗಿದ್ದು, ಒಬ್ಬ ವ್ಯಕ್ತಿ ಅವರ ಕಾಲು, ಬೆನ್ನು ತಲೆಗೆ ಮಸಾಜ್ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಈ ಆರೋಪದ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡುವ ಮೂಲಕ ಬಿಜೆಪಿಯವರು ಮಾತ್ರ ಇಂತಹ ಕ್ರೂರ ಹಾಸ್ಯ ಮಾಡಲು ಸಾಧ್ಯ, ಅವರ ಬೆನ್ನುಮೂಳೆಗೆ ಹಾನಿಯಾಗಿದೆ, ಅದಕ್ಕೆ ವೈದ್ಯಕೀಯ ದಾಖಲೆಗಳೇ ಇವೆ ಎಂದರು.