ಕೊಚ್ಚಿ, ನ 19 (DaijiworldNews/DB): ಚಲಿಸುತ್ತಿದ್ದ ಕಾರಿನಲ್ಲೇ ಮಾಡೆಲ್ವೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಘಟನೆ ಸಂಬಂಧ ಮಹಿಳೆ ಸಹಿತ ನಾಲ್ವರನ್ನು ಬಂಧಿಸಲಾಗಿದೆ.
19 ವರ್ಷದ ಮಾಡೆಲ್ ಮೇಲೆ ಗುರುವಾರ ತಡರಾತ್ರಿ ಸಾಮೂಹಿಕ ಅತ್ಯಾಚಾರ ನಡೆದ ಸಂಬಂಧ ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮೂವರು ಪುರುಷರು ಮತ್ತು ಓರ್ವ ಮಹಿಳೆ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾಡೆಲ್ ಕೊಚ್ಚಿನ್ ಶಿಪ್ ಯಾರ್ಡ್ ಬಳಿಯ ಪಬ್ಗೆ ಭೇಟಿ ನೀಡಿದ್ದಳು. ಎಲ್ಲರೂ ಮದ್ಯಪಾನ ಮಾಡಿದ್ದು, ಆಕೆಯನ್ನು ಕಾಕ್ಕನಾಡ್ನಲ್ಲಿರುವ ಮನೆಗೆ ಬಿಡಲು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಕಾಕ್ಕನಾಡ್ನಲ್ಲಿ ಕಾರಿನಿಂದ ಆಕೆಯನ್ನು ಬೀಳಿಸಿ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಸದ್ಯ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ರೂಂಮೇಟ್ ದಾಖಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್, ಇದು ಆಘಾತಕಾರಿ ಘಟನೆಯಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.