ಅಹಮದಾಬಾದ್, ನ 18 (DaijiworldNews/DB): ಪಬ್ಲಿಸಿಟಿ ಸ್ಟಂಟ್ ಮಾಡಿದ ಕಾರಣಕ್ಕಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಿದ ಪ್ರಸಂಗ ಗುಜರಾತ್ನಲ್ಲಿ ನಡೆದಿದೆ.
ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್ನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕನನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಟೋವೊಂದನ್ನು ಪೋಸ್ಟ್ ಮಾಡಿದಕ್ಕಾಗಿ ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಲಾಗಿದೆ. ಜನರಲ್ ಅಬ್ಸರ್ವರ್ ಆಗಿ ಪೋಸ್ಟ್ಗಳನ್ನು ಹಂಚಿಕೊಳ್ಳಲೆಂದು ತೆರೆದ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದಕ್ಕಾಗಿ ಅವರನ್ನು ಕರ್ತವ್ಯದಿಂದ ತೆಗೆದು ಹಾಕಲಾಗಿದೆ ಎಂದು ಚುನಾವಣಾ ಆಯೋಗ ಆದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಚುನಾವಣಾ ಕರ್ತವ್ಯ ತೊರೆದು ತಮ್ಮ ಎಂದಿನ ಕೆಲಸಕ್ಕೆ ಕೂಡಲೇ ಹಾಜರಾಗಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ ಕಾರು ಸೇರಿದಂತೆ ಅವರಿಗೆ ನೀಡಲಾಗಿದ್ದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಭಿಷೇಕ್ ಇನ್ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು ಒಂದರಲ್ಲಿ ಕಾರಿನ ಪಕ್ಕದಲ್ಲಿ ನಿಂತಿಕೊಂಡಿರುವ ಫೋಟೋವಿದ್ದು, ಅದರ ಮುಂಭಾಗದಲ್ಲಿ ಚುನಾವಣಾ ವೀಕ್ಷಕ ಎಂದು ಬರೆದಿದೆ. ಇನ್ನೊಂದು ಫೋಟೋದಲ್ಲಿ ಮೂವರು ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬಂದಿಯೊಂದಿಗೆ ನಿಂತು ಫೋಟೋಕ್ಕೆ ಪೋಸ್ ನೀಡಿರುವುದಾಗಿದೆ.
ಇನ್ನು ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಕ್ರಿಶನ್ ಬಾಜ್ಪೇಯ್ ಅವರನ್ನು ನೇಮಿಸಲಾಗಿದೆ.