ನವದೆಹಲಿ, ನ 18 (DaijiworldNews/DB): 30 ಲಕ್ಷ ಹುದ್ದೆಗಳು ಸರ್ಕಾರಿ ಇಲಾಖೆಗಳಲ್ಲಿ ಭರ್ತಿಯಾಗದೆ ಉಳಿದಿವೆ. ಪ್ರಧಾನಿ ಮೋದಿ ನೀಡಿದ ಭರವಸೆಯನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೇಂದ್ರ ಸಚಿವಾಲಯ ಸೇವಾ ಕಚೇರಿಗಳಲ್ಲಿ 1,600ರಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಧ್ಯಮ ವರದಿಯನ್ನಾಧರಿಸಿ ಮಾತನಾಡಿದ ಅವರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆಯಿತ್ತು ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ಆ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಪ್ರಧಾನಿ ಕೇವಲ 75 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ, ಎಂಟು ವರ್ಷಗಳ ಅವರ ಅಧಿಕಾರಾವಧಿಯಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಉದ್ಯೋಗ ಸೃಷ್ಟಿಯಾಗುವುದಿರಲಿ, ಇದ್ದ ಹುದ್ದೆಗಳನ್ನೇ ಭರ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.