ಕೊಯಮತ್ತೂರು, ನ 18 (DaijiworldNews/DB): ದೇಹ ಕಾಣದಂತೆ ಓವರ್ ಕೋಟ್ ಧರಿಸುವಂತೆ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಎಲ್ಲಾ ಕಾಲೇಜು ಅಧ್ಯಾಪಕರಿಗೆ ಸೂಚಿಸಿದೆ.
ಈ ಸಂಬಂಧ ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೆ ಇಲಾಖೆ ಪತ್ರ ಬರೆದಿದ್ದು, ಡ್ರೆಸ್ ಕೋಡ್ನ್ನು ಎಲ್ಲಾ ಅಧ್ಯಾಪಕರು ಚಾಚೂ ತಪ್ಪದೆ ಅನುಸರಿಸಬೇಕೆಂದು ನಿರ್ದೇಶನ ನೀಡಿದೆ. ಅಕ್ಟೋಬರ್ 18ರಂದು ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಪಿ. ಧನಶೇಖರ್ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ವಿವಿಧ ಸ್ವಾಯತ್ತ ಕಾಲೇಜುಗಳಲ್ಲಿ ಮಹಿಳಾ ಸಿಬಂದಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದು, ಪಾಲನೆಯಾಗುತ್ತಿದೆ. ಹೀಗಾಗಿ ಇಲಾಖೆ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನು ಉನ್ನತ ಶಿಕ್ಷಣ ಇಲಾಖೆಯ ನಿರ್ಧಾರ ಕುರಿತು ಮಾತನಾಡಿರುವ ಭಾರತಿಯಾರ್ ವಿಶ್ವವಿದ್ಯಾಲಯದ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ. ಪೊನ್ನುಸ್ವಾಮಿ, ಓವರ್ ಕೋಟ್ ಧರಿಸುವುದರಿಂದ ತರಗತಿಯಲ್ಲಿ ಮಹಿಳಾ ಸಿಬಂದಿಗೆ ಆರಾಮದಾಯಕವಾಗಿ ಕರ್ತವ್ಯ ನಿಭಾಯಿಸುವುದು ಸಾಧ್ಯವಾಗುತ್ತದೆ. ಸಮಾನತೆ ಭಾವನೆ ಮೂಡುತ್ತದೆ ಎಂದಿದ್ದಾರೆ.