ಬಿಹಾರ, ನ 18 (DaijiworldNews/DB): ವೈದ್ಯರು ಅನಸ್ತೇಶಿಯಾ ನೀಡದೇ 23 ಮಂದಿ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಗ್ಲೋಬಲ್ ಡೆವಲಪ್ಮೆಂಟ್ ಇನಿಶಿಯೇಟಿವ್ ಎಂಬ ಖಾಸಗಿ ಏಜೆನ್ಸಿಯೊಂದರ ಮುಖಾಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಬಂದ ಮಹಿಳೆಯರಿಗೆ ವೈದ್ಯರು ಅನಸ್ತೇಶಿಯಾ ನೀಡದೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವೇಲೆ ಮಹಿಳೆಯರು ನೋವಿನಿಂದ ಕಿರುಚಿ ಅತ್ತಿದ್ದಾರೆ. ಆದರೂ ಅವರ ಬಾಯಿ ಮುಚ್ಚಿ, ಕೈ ಕಾಲು ಹಿಡಿದುಕೊಂಡು ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.
ಇನ್ನು ಘಟನೆ ಸಂಬಂಧ ತನಿಖೆ ನಡೆಸಲು ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಆದೇಶಿಸಿದ್ದು, ಶೀಘ್ರ ತನಿಖೆ ಪೂರ್ಣಗೊಳಿಸಬೇಕೆಂದು ಸಿವಿಲ್ ಸರ್ಜನ್ಗೆ ತಿಳಿಸಿದ್ದಾರೆ.
30 ಮಂದಿ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರೂ, ಭಯದಿಂದಾಗಿ ಏಳು ಮಂದಿ ಮಹಿಳೆಯರು ಹಿಂದೆ ಸರಿದಿದ್ದರು ಎಂದು ತಿಳಿದು ಬಂದಿದೆ. ಜಿಲ್ಲೆಯ ಪರಬಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಇದೇ ರೀತಿ ಅರವಳಿಕೆ ನೀಡದೇ ಶಸ್ತ್ರಚಿಕಿತ್ಸೆ ನೀಡಿರುವ ಘಟನೆ ಬಯಲಿಗೆ ಬಂದಿದೆ.