ಲಖನೌ, ನ 17 (DaijiworldNews/DB): ಮತಾಂತರಗೊಂಡು ಮದುವೆಯಾಗಲು ಒಪ್ಪದ ಅಪ್ರಾಪ್ತ ಗೆಳತಿಯನ್ನು ಯುವಕನೊಬ್ಬ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
ಅರೆಕಾಲಿಕ ಪೇಂಟರ್ ಸುಫಿಯಾನ್ (21) ಆರೋಪಿ. ನಿಧಿ ಗುಪ್ತಾ ಕೊಲೆಯಾದ ಬಾಲಕಿ. ದುಬಗ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಕುಂಜ್ ಸೆಕ್ಟರ್ ಎಚ್ ನಲ್ಲಿ ಘಟನೆ ನಡೆದಿದೆ. ಆರೋಪಿ ಮತ್ತು ಬಾಲಕಿ ಕುಟುಂಬ ಒಂದೇ ವಸತಿ ಕಟ್ಟಡಲ್ಲಿ ವಾಸವಾಗಿದ್ದು, ಆಕೆ ಬ್ಯುಟೀಶಿಯನ್ ಕೋರ್ಸ್ ಮಾಡುತ್ತಿದ್ದಳು. ಕಳೆದ ಒಂದೂವರೆ ವರ್ಷಗಳಿಂದ ಆರೋಪಿಯು ಆಕೆಯೊಂದಿಗೆ ಸ್ನೇಹ ಬೆಳೆಸಲು ಯತ್ನಿಸುತ್ತಿದ್ದ. ಅಲ್ಲದೆ, ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗುವಂತೆ ಆಕೆಯ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದ. ಇದರಿಂದ ಅವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿ ಆರೋಪಿಯು ಬಾಲಕಿಯನ್ನು ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಾನೆ.
ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಆತನ ವಿರುದ್ದ ಕೊಲೆಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಮತ್ತು ಉತ್ತರ ಪ್ರದೇಶ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಮೊರ್ಡಿಯಾ ತಿಳಿಸಿರುವುದಾಗಿ ವರದಿಯಾಗಿದೆ.