ಬೆಂಗಳೂರು, ನ 17 (DaijiworldNews/MS): ಮತದಾರರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿ, ಅದನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮಾಜಿ ಸಿಎಂ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನೊಳಗೊಂಡ ಕಾಂಗ್ರೆಸ್ ನಾಯಕ ತಂಡ ಇಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಿದೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ವಿಪಕ್ಷ ನಾಯ ಸಿದ್ದರಾಮಯ್ಯ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು.
ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
40% ಭ್ರಷ್ಟಾಚಾರ ಮತ್ತು ಆಂತರಿಕ ಬಿಕ್ಕಟ್ಟಿನಲ್ಲಿ ಮುಳುಗಿಹೋಗಿರುವ ಬಿಜೆಪಿ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಾಮಮಾರ್ಗದಿಂದ ಗೆಲ್ಲಲು ಸಂಚು ಹೂಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳು ಮಾತ್ರವಲ್ಲ ಬಿಜೆಪಿ ಪಕ್ಷವೇ ಷಾಮೀಲಾಗಿದೆ.
ಇಂತಹ ಹಗರಣಗಳಿಂದ ಜನತೆ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಲಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇಂದ್ರ ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ತನಿಖೆಯಲ್ಲಿ ಸಹಕಾರ ನೀಡಬೇಕು.
ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಹಗರಣವನ್ನು ನಡೆಸಿರುವಂತೆ ಮೇಲ್ನೊಟಕ್ಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಇಡೀ ರಾಜ್ಯಕ್ಕೆ ಈ ಆಪರೇಷನ್ ವಿಸ್ತರಿಸುವ ದುರುದ್ದೇಶ ಇದ್ದಂತಿದೆ.
ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ. ಈ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ಬಂಧಿಸಬೇಕು. ಒಂದು ವೇಳೆ ಅವರ ವಿರುದ್ಧ ಎಫ್,ಐ,ಆರ್ ದಾಖಲಿಸದಿದ್ದರೆ ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.