ಮುಂಬೈ, ನ 17 (DaijiworldNews/DB): ಮೊಬೈಲ್ ಫೋನ್ ಬಳಕೆಯಿಂದಾಗಿ ಮಕ್ಕಳಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬಳಕೆಯೇ ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಪಶ್ಚಿಮ ವಿಧರ್ಭ ಪ್ರದೇಶದ ಯವತ್ಮಾಲ್ ಜಿಲ್ಲೆಯ ಬನ್ಸಿ ಗ್ರಾಮದಲ್ಲಿ ಈ ವಿಶಿಷ್ಟ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ. ಮಕ್ಕಳು ಹಾಗೂ ಹದಿಹರೆಯದವರು ಮೊಬೈಲ್ ಫೋನ್ ವ್ಯಸನಿಗಳಾಗಿ ಬದಲಾಗುತ್ತಿರುವುದರಿಂದ ಆತಂಕಗೊಂಡ ಗ್ರಾಮಸ್ಥರು ಅವರಿಗೆ ಮೊಬೈಲ್ ಫೋನ್ ಬಳಕೆಯನ್ನೇ ನಿಷೇಧಿಸುವ ಯೋಚನೆ ತಳೆದು ಅದನ್ನು ಕಾರ್ಯರೂಪಕ್ಕೆ ತಂದರು.
ಮಕ್ಕಳು ವೀಕ್ಷಿಸಬಾರದಂತಹ ಚಿತ್ರ ವೀಡಿಯೋ ಗಳನ್ನು ಮೊಬೈಲ್ ನಲ್ಲಿ ನೋಡುವುದು ಮತ್ತು ಸರ್ಫಿಂಗ್ ಚಟಕ್ಕೆ ಬಿದ್ದ ಬಗ್ಗೆ ಆತಂಕಗೊಂಡೆವು. ಹೀಗಾಗಿ ಅವರಿಗೆ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತಿಸಲಾಯಿತು. ಇದನ್ನು ಎಲ್ಲಾ ಪೋಷಕರು ಪಾಲಿಸಲು ಸೂಚಿಸಲಾಗಿದೆ ಎಂದು ಬನ್ಸಿ ಗ್ರಾಮ ಪಂಚಾಯತ್ ಸರಪಂಚ್ ಗಜಾನನ ತಾಳೆ ಹೇಳಿದ್ದಾರೆ.
ಅಷ್ಟಕ್ಕೂ ಇದು ಗ್ರಾಮಸ್ಥರ ಒಮ್ಮತದ ನಿರ್ಣಯವಾಗಿದ್ದು, ಇದರಿಂದಾಗುವ ತೊಂದರೆಗಳನ್ನು ನಿಭಾಯಿಸಲು ಕೌನ್ಸೆಲಿಂಗ್ ಕೂಡಾ ನಡೆಸಲಾಗುತ್ತದೆ. ಉಲ್ಲಂಘನೆಗಳಯ ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ ಎನ್ನುತ್ತಾರೆ ಸರ್ ಪಂಚ್ ಟೇಲ್.