ಕಲಬುರಗಿ, ನ 17 (DaijiworldNews/HR): ಕಲಬುರಗಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಸಾರ್ವಜನಿಕವಾಗಿ ಭಾಷಣ ಮಾಡುತ್ತ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.
ಚಿತ್ತಾಪುರ ತಾಲೂಕಿನ ವಾಡಿ ಪೋಲಿಸ್ ಠಾಣೆಗೆ ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ಸಲ್ಲಿಸಿದ್ದಾರೆ.
ಇನ್ನು ನ.10 ರಂದು ವಾಡಿಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿರುವ ಖರ್ಗೆ, ನಾನು ಮನಸ್ಸು ಮಾಡಿದರೆ ಕಲಬುರಗಿ ಜಿಲ್ಲೆಯ ಒಬ್ಬ ಬಿಜೆಪಿ ನಾಯಕನೂ ಹೊರಗಡೆ ಓಡಾಡದಂತೆ ಮಾಡುತ್ತೇನೆ ಎಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.