ವಿಜಯಪುರ, ನ 16 (DaijiworldNews/DB): ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದೇ ಶ್ರೀಪಾದ ಎನ್ನುವಂತಾಗಿದೆ. ಅದಕ್ಕಾಗಿ ಬಾದಾಮಿಯಿಂದ ಕೋಲಾರ ಕಡೆ ಮುಖ ಮಾಡಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕುಟುಕಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ಗೆ ಬಂದು ಮಾತನಾಡುವಂತೆ ಸತೀಶ್ ಜಾರಕಿಹೊಳಿ ನನಗೆ ಸವಾಲು ಹಾಕಿದ್ದರು. ಹಾಗಾಗಿ ಅವರಿಗೆ ಉತ್ತರಿಸಲು ಗೋಕಾಕ್ಗೆ ಹೋಗಿದ್ದೇನೆ. ಸತೀಶ್ ಜಾರಕಿಹೊಳಿ ಅವರಿಗೆ ರಾಜಕೀಯದಲ್ಲಿ ಅಂತ್ಯಕಾಲ ಸನಿಹವಾಗಿದ್ದರಿಂದಲೇ ಅಹಂಕಾರದಿಂದ ಮೆರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವುದಾಗಿ ಸಿದ್ದರಾಮಯ್ಯರೆದುರು ಭಾರೀ ಮಾತನಾಡಿದ್ದ ಶಿವಾನಂದ ಪಾಟೀಲರು ಈಗ ತಮ್ಮ ಮಗಳಿಗೆ ಟಿಕೆಟ್ ಕೇಳುತ್ತಿದ್ದಾರೆ. ನನ್ನ ವಿರುದ್ದವೂ ಗೆಲ್ಲುತ್ತೇನೆ ಎಂದು ಸವಾಲು ಹಾಕಿದ್ದರು. ಆದರೆ ಈಗ ಪುತ್ರಿ ಸಂಯುಕ್ತಾಗೆ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.